×
Ad

ಪೊಲೀಸರಿಗೆ ಪ್ರತ್ಯೇಕ ಮೆಡಿಕಲ್ ಶಾಪ್, ಬೇಕರಿ, ಕ್ಯಾಂಟೀನ್

Update: 2016-08-22 22:53 IST

ಶಿವಮೊಗ್ಗ, ಆ. 22: ಇದೇ ಪ್ರಪ್ರಥಮ ಬಾರಿಗೆ ಪೊಲೀಸ್ ಇಲಾಖೆ ಪೊಲೀಸರಿಗಾಗಿ ಶಿವಮೊಗ್ಗ ನಗರದ ಡಿ.ಎ.ಆರ್. ಆವರಣದಲ್ಲಿರುವ ಪೊಲೀಸ್ ಕಾಂಪ್ಲೆಕ್ಸ್‌ನಲ್ಲಿ ಪ್ರತ್ಯೇಕ ಮೆಡಿಕಲ್ ಶಾಪ್, ಬೇಕರಿ ಹಾಗೂ ಕ್ಯಾಂಟೀನ್‌ಗಳನ್ನು ಆರಂಭಿಸಿದೆ. ಈ ಸ್ಥಳದಲ್ಲಿ ಪೊಲೀಸರಿಗೆ ರಿಯಾಯಿತಿ ದರದಲ್ಲಿ ಔಷಧ, ಬೇಕರಿ ಉತ್ಪನ್ನಗಳು ಹಾಗೂ ಊಟೋಪಚಾರ ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ.

ಈ ನೂತನ ವ್ಯವಸ್ಥೆಗೆ ಆ. 23 ರಂದು ಸಂಜೆ 4:30 ಕ್ಕೆ ಡಿ.ಎ.ಆರ್. ಕಾಂಪ್ಲೆಕ್ಸ್‌ನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನವರ್ ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.

ಜಿಲ್ಲೆಯ ಪೊಲೀಸರು ಮಾತ್ರವಲ್ಲದೆ ಕರ್ತವ್ಯದ ಮೇಲೆ ಹೊರ ಜಿಲ್ಲೆ, ಪ್ರದೇಶಗಳಿಂದ ಆಗಮಿಸುವ ಪೊಲೀಸರೂ ಈ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಮೆಡಿಕಲ್ ಶಾಪ್:

ಜಿಲ್ಲೆಯ ಪೊಲೀಸ್ ಅಧಿಕಾರಿ, ಸಿಬ್ಬಂದಿ, ನಿವೃತ್ತ ನೌಕರರು, ಹೋಂ ಗಾರ್ಡ್ಸ್ ಮತ್ತು ಮಾಜಿ ಸೈನಿಕರು ರಿಯಾಯಿತಿ ದರದಲ್ಲಿ ಔಷಧ ಖರೀದಿಸಬಹುದಾಗಿದೆ. ಎಲ್ಲ ರೀತಿಯ ಔಷಧ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಶೇ. 30 ರಷ್ಟು ರಿಯಾಯಿತಿ ಕಲ್ಪಿಸಲಾಗಿದೆ. ಬೇಕರಿ: ಪೊಲೀಸ್ ಸಿಬ್ಬಂದಿಯ ನೇತೃತ್ವದಲ್ಲಿಯೇ ಬೇಕರಿ ಉತ್ಪನ್ನ ತಯಾರಿಸುವ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಉತ್ತಮ ಗುಣಮಟ್ಟದ ಬೇಕರಿ ಉತ್ಪನ್ನಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್ ಕ್ಯಾಂಟೀನ್: ಪ್ರಸ್ತುತ ಜಿಲ್ಲೆ ಮತ್ತು ಹೊರ ಪ್ರದೇಶಗಳಿಂದ ಕರ್ತವ್ಯದ ಮೇಲೆ ನಗರಕ್ಕೆ ಆಗಮಿಸುವ ಪೊಲೀಸರಿಗೆ ಹೆಚ್ಚಿನ ದರ ನೀಡಿ ಹೋಟೆಲ್‌ಗಳಲ್ಲಿ ಊಟ-ಉಪಹಾರ ಮಾಡಬೇಕಾದ ಸ್ಥಿತಿಯಿದೆ. ಹಾಗೆಯೇ ಪೊಲೀಸ್ ಘಟಕಗಳಿರುವ ಸ್ಥಳದ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಹೋಟೆಲ್‌ಗಳಿಲ್ಲದೆ ಇರುವುದರಿಂದ ಅಧಿಕಾರಿಗಳು ಊಟೋಪಚಾರಕ್ಕೆ ಪರಿತಪಿಸುವಂತಾಗಿದೆ.

ಈ ಹಿನ್ನೆಲೆಯಲ್ಲಿ ಸಿಬ್ಬಂದಿಗಾಗುತ್ತಿರುವ ಅನಾನುಕೂಲತೆಗಳನ್ನು ತಪ್ಪಿಸಲು ಹಾಗೂ ಸಿಬ್ಬಂದಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಊಟೋಪಚಾರ ಒದಗಿಸುವ ಮಹತ್ತರ ಉದ್ದೇಶದಿಂದ ಪೊಲೀಸ್ ಕ್ಯಾಂಟೀನ್ ತೆರೆಯಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News