ಜೂಜಾಡುತ್ತಿದ್ದ ನಾಲ್ವರು ಪೊಲೀಸರ ಸಹಿತ 35 ಮಂದಿ ಅಂದರ್
ಚಿಕ್ಕಮಗಳೂರು, ಆ.22: ಜೂಜು ಅಡ್ಡೆ ಯೊಂದಕ್ಕೆ ರವಿವಾರ ರಾತ್ರಿ ಮಾರು ವೇಷದಲ್ಲಿ ದಾಳಿ ನಡೆಸಿದ ಎಸ್ಪಿ ಅಣ್ಣಾಮಲೈ ಜೂಜಾಡುತ್ತಿದ್ದ ನಾಲ್ವರು ಪೊಲೀಸರು ಸಹಿತ 35 ಮಂದಿಯನ್ನು ಬಂಧಿಸಿದ್ದಾರೆ.
ಯೋಗೀಶ್, ಬಸವರಾಜು, ಪೂರ್ಣೇಶ್ ಹಾಗೂ ಲೋಕೇಶ್ ಬಂಧಿತ ಪೊಲೀಸ್ ಸಿಬ್ಬಂದಿಯಾಗಿದ್ದು, ಎಲ್ಲರನ್ನೂ ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಸಿಕ್ಕಿಬಿದ್ದಿರುವ ನಾಲ್ವರು ಪೊಲೀಸರ ಪೈಕಿ ಮೂವರು ಜೂಜಾಡುತ್ತಿದ್ದ ಆರೋಪ ಎದುರಿಸುತ್ತಿದ್ದರೆ, ಓರ್ವ ಕ್ಲಬ್‌ನಿಂದ ಲಂಚ ಪಡೆದಿರುವ ಆರೋಪ ಎದುರಿಸುತ್ತಿದ್ದಾನೆ.
ಚಿಕ್ಕಮಗಳೂರಿನ ಹಿರೇಮಗಳೂರು ಬಳಿ ಇರುವ ಕ್ಲಬ್‌ವೊಂದನ್ನು ಕೇಂದ್ರೀಕರಿಸಿ ಈ ದಾಳಿ ನಡೆದಿದೆ. ಇಲ್ಲಿ ಅಕ್ರಮವಾಗಿ ಜೂಜಾಟ ನಡೆಯುತ್ತಿತ್ತೆನ್ನಲಾಗಿದೆ. ಘಟನೆಯ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಹಿಂದೆ ಉಡುಪಿ ಜಿಲ್ಲಾ ಎಸ್ಪಿಯಾಗಿದ್ದ ವೇಳೆ ದಕ್ಷ ಹಾಗೂ ಸಮರ್ಥ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದ ಎಸ್ಪಿ ಅಣ್ಣಾಮಲೈ ಇದೀಗ ಚಿಕ್ಕಮಗಳೂರಿನಲ್ಲೂ ತನ್ನ ಪ್ರತಾಪ ಪ್ರದರ್ಶಿಸುತ್ತಿದ್ದು, ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.