ಎಸ್ಪಿ ರವಿ ಡಿ.ಚೆನ್ನಣ್ಣನವರ್ ದಿಢೀರ್ ವರ್ಗಾವಣೆ
ಶಿವಮೊಗ್ಗ, ಆ. 22: ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನವರ್ ಅವರು ಮೈಸೂರಿಗೆ ಎಸ್ಪಿಯಾಗಿ ವರ್ಗಾವಣೆಗೊಂಡಿದ್ದಾರೆ.
ಎಸ್ಪಿಯವರ ದಿಢೀರ್ ವರ್ಗಾವಣೆಯನ್ನು ಖಂಡಿಸಿ ಈಗಾಗಲೇ ವಿವಿಧ ಸಂಘ ಸಂಸ್ಥೆಗಳು ರಸ್ತೆ ತಡೆ ನಡೆಸಿ ಪ್ರತಿಭಟನೆಯನ್ನು ನಡೆಸುತ್ತಿದ್ದು, ಇದು ನಾಳೆಯೂ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಳೆದ 1 ವರ್ಷ 5 ತಿಂಗಳಿಂದ ಶಿವಮೊಗ್ಗ ಎಸ್ಪಿಯಾಗಿ ಸೇವೆ ಸಲ್ಲಿಸಿದ ಅವರು ಶಿವಮೊಗ್ಗದಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದರು. ಅಲ್ಲದೆ, ಜಿಲ್ಲಾದ್ಯಂತ ಅನೇಕ ಬದಲಾವಣೆಗಳಿಗೆ ಕಾರಣರಾಗಿದ್ದರು. ವಿನೂತನ ಮಾದರಿಯ ‘ಓಬವ್ವ ಪಡೆ’ ನಿರ್ಮಾಣ ಮಾಡಿ ಹೆಣ್ಣು ಮಕ್ಕಳ ಪ್ರಾಣ, ಮಾನ ರಕ್ಷಣೆಯ ಜವಾಬ್ದಾರಿಯುತ ಕೆಲಸ ನಿರ್ವಹಿಸುತ್ತಿದ್ದರು ಇಂತಹ ದಕ್ಷ ಅಧಿಕಾರಿಯನ್ನು ವರ್ಗಾಯಿಸಲು ಅವಕಾಶ ನೀಡುವುದಿಲ್ಲ. ಅವರ ವರ್ಗಾವಣೆಯನ್ನು ಸರಕಾರ ಕೈಬಿಡಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದ್ದಾರೆ.
ಅಲ್ಲದೆ, ಕೋಮು ಸೂಕ್ಷ್ಮ ಜಿಲ್ಲೆಗಳಲ್ಲಿ ಒಂದಾಗಿದ್ದ ಶಿವಮೊಗ್ಗದಲ್ಲಿ ಕೋಮು ಸೌಹಾರ್ದತೆಗೆ ಹೆಚ್ಚು ಒತ್ತು ನೀಡುತ್ತಿದ್ದ ಎಸ್ಪಿ ಅವರನ್ನು ಗಣೇಶ ಹಬ್ಬ ಮುಗಿಯುವ ವರೆಗಾದರೂ ವರ್ಗಾವಣೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಬೇಕು ಎಂದು ಆಗ್ರಹಿಸಿದ್ದಾರೆ.
ಜಿಲ್ಲಾದ್ಯಂತ ಅನೇಕ ಬದಲಾವಣೆಗಳನ್ನು ತಂದಿರುವ ಎಸ್ಪಿ ರವಿ ಡಿ. ಚೆನ್ನಣ್ಣನವರ್ ‘ಟ್ರಬರ್ ಶೂಟರ್’ ಎಂದು ಪ್ರಖ್ಯಾತಿ ಹೊಂದಿದ್ದರು.
ಬಾವುಕರಾದ ಟ್ರಬಲ್ ಶೂಟರ್
ಇಂದು ನಗರದ ಬೊಮ್ಮನ ಕಟ್ಟೆ ಬಡಾವಣೆಯಲ್ಲಿ ಪೊಲಿಸ್ ಚೌಕಿ ಉದ್ಘಾಟನೆಯ ವೇಳೆ ಶಿವಮೊಗ್ಗ ದಿಂದ ಮೈಸೂರಿಗೆ ಎಸ್ಪಿಯಾಗಿ ವರ್ಗಾವಣೆಗೊಂಡ ಸುದ್ದಿ ತಿಳಿದ ‘ಟ್ರಬಲ್ ಶೂಟರ್’ ಐಎಎಸ್ ಅಧಿಕಾರಿ ರವಿ ಡಿ. ಚೆನ್ನಣ್ಣನವರ್ ಬಾವುಕರಾದ ಘಟನೆಯೂ ನಡೆಯಿತು.