ಶಾಲಾ ಕಾಲೇಜುಗಳ ಕ್ಯಾಂಟೀನ್‌ನಿಂದ ಫಿಝ್ಝಾ, ಬರ್ಗರ್ ಔಟ್?

Update: 2016-08-23 03:59 GMT

ಹೊಸದಿಲ್ಲಿ, ಆ.23: ಫಿಝ್ಝ, ಬರ್ಗರ್ ಹಾಗೂ ಕೆಲ ತಂಪು ಪಾನೀಯಗಳು ಶಾಲಾ, ಕಾಲೇಜು ಕ್ಯಾಂಟೀನ್‌ನಿಂದ ದೂರವಾಗಲಿವೆ. ಮಕ್ಕಳು ಜಂಕ್‌ಫುಡ್ ತಿನ್ನುವುದನ್ನು ತಪ್ಪಿಸುವ ಸಲುವಾಗಿ ಆಹಾರ ಸುರಕ್ಷಾ ನಿಯಂತ್ರಣ ಸಂಸ್ಥೆಯಾದ, ಪುಡ್ ಸೇಫ್ಟಿ ಆ್ಯಂಡ್ ಸ್ಟಾಂಡರ್ಡ್ ಅಥಾರಿಟಿ ಆಫ್ ಇಂಡಿಯಾ (ಎಫ್‌ಎಸ್‌ಎಸ್‌ಎಐ) ಇದೀಗ ಅಧಿಕ ಲವಣಾಂಶ, ಸಕ್ಕರೆ ಮತ್ತು ಕೊಬ್ಬಿನ ಅಂಶ ಇರುವ ಆಹಾರಗಳನ್ನು ಪಟ್ಟಿ ಮಾಡುತ್ತಿದ್ದು, ಇವುಗಳನ್ನು ಶಾಲೆಯ ಆಸುಪಾಸಿನಲ್ಲಿ ಮಕ್ಕಳಿಗೆ ಲಭ್ಯವಾಗದಂತೆ ತಡೆಯಲು ಕ್ರಮ ಕೈಗೊಳ್ಳಲು ನಿರ್ಧರಿಸಿದೆ.
ಮಕ್ಕಳ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುವ ಆಹಾರವಸ್ತುಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದ್ದು, ಇವುಗಳನ್ನು ಮಕ್ಕಳು ಹಾಗೂ ಯುವಕರು ಖಾಯಂ ಆಗಿ ಸೇವಿಸಬಾರದು ಎಂದು ಎಫ್‌ಎಸ್‌ಎಸ್‌ಎಐ ಮುಖ್ಯ ಕಾರ್ಯನಿರ್ವಾಹಕ ಪವನ್ ಕುಮಾರ್ ರೆಡ್ಡಿ ಹೇಳಿದ್ದಾರೆ.
ಈ ಪಟ್ಟಿಯಲ್ಲಿ ಚಿಪ್ಸ್, ಫಿಝ್ಝ್, ಬರ್ಗರ್, ರೆಡಿ ಟೂ ಈಟ್ ನೂಡಲ್ಸ್, ಸಕ್ಕರೆ ಅಂಶ ಅಧಿಕವಾಗಿರುವ ತಂಪು ಪಾನೀಯಗಳು, ಆಲೂಗಡ್ಡೆ ಫ್ರೈ ಮತ್ತು ಚಾಕಲೇಟ್ ಸೇರುವ ನಿರೀಕ್ಷೆ ಇದೆ.
ಮಕ್ಕಳು ಹಾಗೂ ಯುವಕರಲ್ಲಿ ಬೊಜ್ಜು ಹಾಗೂ ಮಧುಮೇಹ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಸಂಸ್ಥೆ ಮುಂದಾಗಿದೆ. ಶಾಲಾ ಆವರಣದಲ್ಲಿ ಪೌಷ್ಟಿಕ ಆಹಾರಗಳು ಮಾತ್ರ ಸಿಗುವಂತೆ ಕ್ರಮ ಕೈಗೊಳ್ಳಲು ಆಹಾರ ನಿಯಂತ್ರಣ ಸಂಸ್ಥೆೆ ಕಳೆದ ಅಕ್ಟೋಬರ್‌ನಲ್ಲಿ ಮಾರ್ಗಸೂಚಿ ಹೊರಡಿಸಿತ್ತು. ಈ ಮೂಲಕ ಜಂಕ್ ಫುಡ್ ಕಡಿಮೆ ಮಾಡಲು ಕ್ರಮ ಕೈಗೊಂಡಿತ್ತು. ಇದರಲ್ಲಿ ಅಧಿಕ ಕೊಬ್ಬಿನ ಆಹಾರವಸ್ತುಗಳು ಶಾಲೆಯ 50 ಮೀಟರ್ ವ್ಯಾಪ್ತಿಯಲ್ಲಿ ಸಿಗದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿತ್ತು.
ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ 2000ನೆ ಇಸವಿಯಲ್ಲಿ 32 ದಶಲಕ್ಷ ಇದ್ದುದು, 2013ರ ವೇಳೆಗೆ ದುಪ್ಪಟ್ಟು ಆಗಿದೆ. ಮುಂದಿನ 15 ವರ್ಷಗಳಲ್ಲಿ ಇದು 10 ಕೋಟಿಯನ್ನು ಮೀರುವ ನಿರೀಕ್ಷೆ ಇದೆ. 2014ರ ವೇಳೆಗೆ ಜಾಗತಿಕ ಮಟ್ಟದಲ್ಲಿ ಐದು ವರ್ಷಕ್ಕಿಂತ ಕೆಳಗಿನ 41 ದಶಲಕ್ಷ ಬೊಜ್ಜು ಮಕ್ಕಳು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News