×
Ad

ಆಶ್ರಯ-ಅಕ್ರಮ ಸಕ್ರಮ ಸಮಿತಿ ಸಭಾ ನಡಾವಳಿ ಅನುಷ್ಠಾನಕ್ಕೆ ಮನವಿ

Update: 2016-08-23 21:47 IST

ಚಿಕ್ಕಮಗಳೂರು, ಆ.23: ಆಶ್ರಯ ಸಮಿತಿ ಹಾಗೂ ಅಕ್ರಮ ಸಕ್ರಮ ಸಮಿತಿಯ ಸಭಾ ನಡಾವಳಿಯನ್ನು ಅನುಷ್ಠಾನಕ್ಕೆ ತಂದರೆ ಬಡವರಿಗೆ ಅನುಕೂಲವಾಗುತ್ತದೆ ಎಂದು ಒತ್ತಾಯಿಸಿ ನಗರ ಆಶ್ರಯ ಸಮಿತಿ ಸದಸ್ಯರು ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿಯವರಿಗೆ ಮನವಿ ಸಲ್ಲಿಸಿದರು.

ನಗರ ಆಶ್ರಯ ಸಮಿತಿ ಸದಸ್ಯ ಹಿರೇಮಗಳೂರು ರಾಮಚಂದ್ರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಸದಸ್ಯರು ನಡಾವಳಿ ಅನುಷ್ಠಾನಕ್ಕೆ ಆಗ್ರಹಿಸಿದರು.

ಈ ಸಂದರ್ಭ ರಾಮಚಂದ್ರ ಮಾತನಾಡಿ, ನಗರ ಆಶ್ರಯ ಸಮಿತಿ ಹಾಗೂ ತಾಲೂಕು ಅಕ್ರಮ ಸಮಿತಿಯಲ್ಲಿ ಇದುವರೆಗೂ ಯಾವುದೇ ಬಡವರಿಗೆ ಒಂದು ಮನೆಯನ್ನಾಗಲಿ ಅಥವಾ ಭೂಮಿಯನ್ನಾಗಲಿ ನೀಡದಿರುವುದು ದುರದೃಷ್ಟಕರ ಸಂಗತಿಯಾಗಿದೆ.

ನಗರ ಸೇರಿದಂತೆ ತಾಲೂಕಿನಲ್ಲಿ ಸಹಸ್ರಾರು ಮಂದಿ, ಸೂರಿಲ್ಲದ ಬಡವರು ಮನೆಗಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅಕ್ರಮ ಸಕ್ರಮಕ್ಕಾಗಿ ಸಲ್ಲಿಸಿರುವ ಅರ್ಜಿಗಳಂತೂ ವಿಲೇವಾರಿಯಾಗದೆ ಧೂಳು ಹಿಡಿಯುತ್ತಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ವಿಳಂಬ ಧೋರಣೆಯಿಂದ ಸಭಾ ನಡಾವಳಿಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಸಂಪೂರ್ಣ ನಿರ್ಲಕ್ಷ ವಹಿಸಿದ್ದು ಜಿಲ್ಲಾಧಿಕಾರಿಗಳು ಕೂಡಲೇ ಗಮನ ಹರಿಸಿ ಬಡವರು ಹಾಗೂ ಭೂ ರಹಿತರಿಗೆ ಅನುಕೂಲ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.

ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಸಂಚಲನ ಮೂಡಿಸಿ ಅಧಿಕಾರಿ ಮತ್ತು ಸಿಬ್ಬಂದಿಗೆ ಚಾಟಿ ಬೀಸುವ ಮೂಲಕ ಆಡಳಿತಕ್ಕೆ ಚುರುಕು ಮುಟ್ಟಿಸುವ ಮೂಲಕ ಬಡವರಿಗೆ ಹಾಗೂ ಸಾರ್ವಜನಿಕ ವಲಯದಲ್ಲಿ ತಕ್ಷಣ ಕೆಲಸವಾಗುವ ಭರವಸೆ ಮೂಡಿಸಿರುವುದು ಸ್ವಾಗತಾರ್ಹವಾದುದು. ಬಡವರ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸುವ ಮೂಲಕ ನೆಮ್ಮದಿಯಾಗಿ ಬದುಕಲು ನೆರಳು ನೀಡುತ್ತೀರೆಂಬ ವಿಶ್ವಾಸವಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಎಸ್ಸಿ, ಎಸ್ಟಿ ವಿಭಾಗದ ಅಧ್ಯಕ್ಷ ಮಲ್ಲೇಶ್, ಅಕ್ರಮ ಸಕ್ರಮ ಸಮಿತಿ ಸದಸ್ಯ ಶಾಂತಕುಮಾರ್, ಕೃಷ್ಣಮೂರ್ತಿ, ಮುನಿಸ್ವಾಮಿ, ಚಂದ್ರಪ್ಪ, ಕಾಂತರಾಜು, ಸ್ವಾಮಿ, ನೇತ್ರಾವತಿ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News