×
Ad

ಆಧುನಿಕತೆಯ ನೆಪದಲ್ಲಿ ಮರೆಯಾಗುತ್ತಿರುವ ಜಾನಪದ ಸಂಸ್ಕೃತಿ : ರೇಣುಕಾ ಉಮೇಶ್

Update: 2016-08-23 21:49 IST

ಕಡೂರು, ಆ.23: ಆಧುನಿಕತೆಯ ನೆಪದಲ್ಲಿ ನಾವು ನಮ್ಮ ಜಾನಪದ ಸಂಸ್ಕೃತಿಯನ್ನು ಮರೆಯುತ್ತಿದ್ದು, ಇದರಿಂದ ನಮ್ಮ ಭವ್ಯ ಸಂಸ್ಕೃತಿಗೆ ಧಕ್ಕೆ ಬರುವ ಸಾಧ್ಯತೆ ಇದೆ ಎಂದು ತಾಲೂಕು ಪಂಚಾಯತ್ ಅಧ್ಯಕ್ಷೆ ರೇಣುಕಾ ಉಮೇಶ್ ಹೇಳಿದರು.

ಅವರು ತಾಲೂಕಿನ ಪಟ್ಟಣಗೆರೆ ಗ್ರಾಮದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಜಿಲ್ಲಾ ಕನ್ನಡ ಜಾನಪದ ಪರಿಷತ್ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ಜಾನಪದ ದಿನಾಚರಣೆಯನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ನಗರ ಮತ್ತು ಪಟ್ಟಣಗಳಲ್ಲಿ ಜಾನಪದ ಸಂಸ್ಕೃತಿ ಇಲ್ಲದಂತಾಗಿದೆ. ಆದರೆ ಇಂದಿಗೂ ಗ್ರಾಮೀಣ ಭಾಗದಲ್ಲಿ ಜಾನಪದ ಕಲೆ ಮತ್ತು ಸಂಸ್ಕೃತಿ ಜೀವಂತವಾಗಿದ್ದು, ಅದು ಗ್ರಾಮೀಣ ಭಾಗದ ಜನರಲ್ಲಿ ಹಾಸುಹೊಕ್ಕಾಗಿದ್ದು, ಅದರ ಉಳಿವಿಗೆ ಸರಕಾರ, ಸಂಘ ಸಂಸ್ಥೆಗಳು ಹಾಗೂ ನಾಗರಿಕರು ಕೈ ಜೋಡಿಸಬೇಕಾಗಿದೆ ಎಂದು ಕರೆ ನೀಡಿದರು.

ಪ್ರಧಾನ ಸಂಚಾಲಕ ಮರಡಿಹಳ್ಳಿ ಹನುಮಂತಪ್ಪ ಮಾತನಾಡಿ, ಜೀವನದ ಪ್ರತಿಯೊಂದು ಕ್ಷಣದಲ್ಲೂ ಗ್ರಾಮೀಣ ಜನರು ಜಾನಪದ ಸಂಸ್ಕೃತಿಯನ್ನೇ ಹಿನ್ನೆಲೆಯಾಗಿ ಬಳಸುತ್ತಾರೆ. ಈ ಜಾನಪದ ಸಂಸ್ಕೃತಿ ನೀಡುವ ಸಂದೇಶದ ಸೌಂದರ್ಯವನ್ನು ಆಸ್ವಾದಿಸಲು ಪಟ್ಟಣ ಪ್ರದೇಶದಲ್ಲಿ ಸಾಧ್ಯವಾಗುವುದಿಲ್ಲ ಎಂದು ಹೇಳಿದ ಅವರು, ನಮ್ಮ ಮುಂದಿನ ಪೀಳಿಗೆಗೆ ಜಾನಪದ ಸೌಂದರ್ಯವನ್ನು ತಿಳಿಸಿ ಉಳಿಸಬೇಕಾಗಿದೆ ಎಂದರು.

ಜಾನಪದ ಮತ್ತು ಕಲೆಗಳ ಬಗ್ಗೆ ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ನಾರಾಯಣ ಪಾಟುಕಲೆ ವಹಿಸಿದ್ದರು, ಕುರುಬಗೆರೆ ವೆಂಕಟೇಶ್, ಉಪನ್ಯಾಸಕ ರಾಮೇಗೌಡ, ಜಗದೀಶ್, ಸಿದ್ರಾಮಪ್ಪ, ಮೈಲಾರಪ್ಪ ಮತ್ತು ವೀರಗಾಸೆ ಕಲಾವಿದರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News