×
Ad

ಕ್ರೀಡೆಯಿಂದ ಮಾನಸಿಕ, ದೈಹಿಕ ಸದೃಢತೆ

Update: 2016-08-23 21:53 IST

ವೀರಾಜಪೇಟೆ, ಆ.23: ಒಲಿಂಪಿಕ್ಸ್‌ನಲ್ಲಿಪದಕ ಗಳಿಸಿದ ಸಿಂಧು-ಸಾಕ್ಷಿಯಂತಹವರು ಹಣವಂತರಲ್ಲ ಸಾಮಾನ್ಯ ಮನೆತನದವರು. ಸಾಧನೆಗೆ ಗುರಿ ಮುಖ್ಯ. ಇಂದು ಗ್ರಾಮೀಣ ಶಾಲೆಯಲ್ಲಿ ಕ್ರೀಡಾಕೂಟ ಆಯೋಜನೆ ಮಾಡಿ ಸುಪ್ತ ಪ್ರತಿಭೆಗಳಿಗೆ ಅವಕಾಶ ನೀಡಿರುವುದು ಸಂತೋಷ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಅಚ್ಚಪಂಡ ಮಹೇಶ್ ಹೇಳಿದರು.

ವೀರಾಜಪೇಟೆ ಸಮೀಪದ ಹೆಗ್ಗಳ ಗ್ರಾಮದಲ್ಲಿನ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ಆದರೆ ಎಲ್ಲ್ಲಕ್ಕಿಂತಲೂ ಮುಖ್ಯವಾದದ್ದು ಕ್ರೀಡಾ ಸ್ಫೂರ್ತಿ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೊಡಗಿಸಿಕೊಂಡು ಭವಿಷ್ಯದ ಕ್ರೀಡಾಪಟುಗಳಾಗಿ ಹೊರಹೊಮ್ಮಬೇಕು ಎಂದರು.

  ನಮ್ಮ ರಾಜ್ಯದ ಅನೇಕ ಸ್ಥಳಕ್ಕೆ ಹೋಗಿ ಬಂದರೂ, ಕೊಡಗಿನ ಪ್ರಕೃತಿ ರಮಣೀಯತೆ ಎಲ್ಲೂ ಕಾಣಲು ಸಾಧ್ಯವಿಲ್ಲ. ಇಲ್ಲಿ ಕ್ರೀಡೆ ಸೇರಿದಂತೆ ಎಲ್ಲದಕ್ಕೂ ಮಳೆಯ ಅಡ್ಡಿ ಸಾಮಾನ್ಯವಾಗಿರುತ್ತದೆ. ಮಳೆಯ ನಡುವೆ ಉತ್ತಮವಾಗಿ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಕ್ರೀಡೆ, ಮಾನಸಿಕ ಹಾಗೂ ದೈಹಿಕವಾಗಿ ಸದೃಢತೆಯನ್ನು ತಂದು ಕೊಡುತ್ತದೆ ಎಂದು ಮಹೇಶ್ ಹೇಳಿದರು.

   ಮುಖ್ಯ ಅತಿಥಿ ತಾಪಂ ಸದಸ್ಯ ಬಿ.ಆರ್. ಗಣೇಶ್ ಮಾತನಾಡಿ, ಕ್ರೀಡೆಯಲ್ಲಿ ಉತ್ತಮವಾಗಿ ಭವಿಷ್ಯ ರೂಪಿಸಿಕೊಂಡು ಮುಂದಿನ ದಿನದಲ್ಲಿ ಉತ್ತಮ ಕ್ರೀಡಾಪಟುವಾಗಿ ಈ ಪುಟ್ಟ ಜಿಲ್ಲೆಯ ಗರಿಮೆಯನ್ನು ಎತ್ತಿ ಹಿಡಿಯಿರಿ. ಇಂದು ಕೊಡಗಿನಲ್ಲಿ ಕ್ರೀಡೆಗೆ ಹೆಚ್ಚಿನ ಒಲವು ಇದ್ದು, ಕ್ರೀಡಾ ಸ್ಫೂರ್ತಿಗೆ ಒತ್ತು ನೀಡಲಾಗುತ್ತಿದೆ. ಇಂತಹ ವಾತಾವರಣದಲ್ಲಿ ವಿದ್ಯಾರ್ಥಿಗಳು ಸಹ ಕ್ರೀಡೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡು ಉತ್ತಮ ಕ್ರೀಡಾ ಬದುಕು ರೂಪಿಸಿಕೊಳ್ಳಿ ಎಂದರು.

ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಪಿ.ಡಿ.ರತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೇಟೋಳಿ ಗ್ರಾಪಂ ಅಧ್ಯಕ್ಷೆ ಚೋಂದಮ್ಮ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಬೇಟೋಳಿ ಗ್ರಾಪಂ ಉಪಾಧ್ಯಕ್ಷ ವಸಂತ ಕಟ್ಟಿ, ಗ್ರಾಪಂ ಸ ಸ್ಯರಾದ ಶೀಲಾಮಣಿ, ಲಾವಣಿ, ಕ್ಲಸ್ಟರ್ ಅಧಿಕಾರಿ ವೆಂಕಟೇಶ್, ವಿಶ್ವನಾಥ್ ಹಾಗೂ ಚಂದ್ರಶೇಖರ್ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಯಲ್ಲಪ್ಪ ಪೂಜಾರಿ ಸ್ವಾಗತಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು, ದೈಹಿಕ ಶಿಕ್ಷಕ ಮಂಜುನಾಥ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News