×
Ad

ಎಸ್ಪಿ ವರ್ಗಾವಣೆ ಕ್ರಮಕ್ಕೆ ವ್ಯಾಪಕ ಆಕ್ರೋಶ

Update: 2016-08-23 22:07 IST

ಶಿವಮೊಗ್ಗ, ಆ.23: ತಮ್ಮ ನೇರ-ನಿರ್ಭೀತ ಕಾರ್ಯವೈಖರಿಯ ಮೂಲಕ ಜಿಲ್ಲೆಯ ಜನಮಾನಸದಲ್ಲಿ ‘ಟ್ರಬಲ್ ಶೂಟರ್’ ಐಪಿಎಸ್ ಅಧಿಕಾರಿ ಎಂದೇ ಹೆಸರು ಸಂಪಾದಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನವರ್‌ರನ್ನು ವರ್ಗಾವಣೆ ಮಾಡಿರುವ ಸರಕಾರದ ಕ್ರಮಕ್ಕೆ ಜಿಲ್ಲೆಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ರವಿ ಡಿ. ಚೆನ್ನಣ್ಣನವರ್ ಅವರು ಜನಸಾಮಾನ್ಯರೊಂದಿಗೆ ನೇರವಾಗಿ ಬೆರೆಯುತ್ತಿದ್ದರು. ಯಾವುದೇ ರಾಜಕೀಯ ಒತ್ತಡಕ್ಕೆ ಮಣೆ ಹಾಕುತ್ತಿರಲಿಲ್ಲ. ಕಾನೂನುಬಾಹಿರ ಕೃತ್ಯ ನಡೆಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರಗಿಸುತ್ತಿದ್ದರು. ಸಿನಿಮೀಯ ಶೈಲಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದರು. ಇದರಿಂದ ಸೀಮಿತಾವಧಿಯಲ್ಲಿಯೇ ಜಿಲ್ಲೆಯ ಜನಮಾನಸದಲ್ಲಿ ಜನಪ್ರಿಯತೆ ಸಂಪಾದಿಸಿದ್ದ ಅವರ ಕಾರ್ಯವೈಖರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಸೇರಿದಂತೆ ವಿವಿಧ ಪಕ್ಷಗಳ ಶಾಸಕರು, ಮುಖಂಡರು ಬಹಿರಂಗವಾಗಿಯೇ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಎಸ್ಪಿಯವರ ಬಗ್ಗೆ ಜನಮಾನಸದಲ್ಲಿದ್ದ ಜನಪ್ರಿಯತೆ ಹಾಗೂ ತಮ್ಮ ಮೂಗಿನ ನೇರಕ್ಕೆ ನಡೆಯುವುದಿಲ್ಲವೆಂಬ ಆಕ್ರೋಶ ಕೆಲ ರಾಜಕಾರಣಿಗಳಲ್ಲಿತ್ತು. ಈ ಹಿನ್ನೆಲೆಯಲ್ಲಿ ಅವರು ಶಿವಮೊಗ್ಗಕ್ಕೆ ಆಗಮಿಸಿದ ಕೆಲ ತಿಂಗಳುಗಳಿಂದಲೇ ಅವರನ್ನು ಇಲ್ಲಿಂದ ವರ್ಗಾವಣೆ ಮಾಡಿಸುವ ಕುತಂತ್ರಗಳು ಆರಂಭವಾಗಿದ್ದವು. ಆದರೆ ಚೆನ್ನಣ್ಣನವರ್ ಕಾರ್ಯಶೈಲಿಗೆ ಸಂತಸಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಬಿಜೆಪಿ ಪ್ರಾಬಲ್ಯವಿರುವ ಹಾಗೂ ಕೋಮು ಸೂಕ್ಷ್ಮ ಜಿಲ್ಲೆಯಾಗಿರುವ ಶಿವಮೊಗ್ಗದಿಂದ ಅವರನ್ನು ವರ್ಗಾವಣೆ ಮಾಡದಿರುವ ನಿರ್ಧಾರ ಕೈಗೊಂಡಿದ್ದರು.

ಈ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವು ರಾಜಕಾರಣಿಗಳು ಹಲವು ಬಾರಿ ಎಸ್ಪಿಯನ್ನು ವರ್ಗಾವಣೆಗೊಳಿಸುವಂತೆ ಮುಖ್ಯಮಂತ್ರಿ ಮೇಲೆ ಒತ್ತಡ ಹೇರುತ್ತಾ ಬಂದರೂ ಸಿಎಂ ಮಾತ್ರ ಇವ್ಯಾವುದೇ ಒತ್ತಡಕ್ಕೆ ಮಣಿದಿರಲಿಲ್ಲ. ಎರಡು ವರ್ಷಗಳ ಕಾಲ ಅವರನ್ನು ಶಿವಮೊಗ್ಗದಿಂದ ವರ್ಗಾವಣೆಗೊಳಿಸದಿರುವ ನಿರ್ಧಾರ ಮಾಡಿದ್ದರೆನ್ನಲಾಗಿದೆ. ಆದರೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಕೆಲ ರಾಜಕಾರಣಿಗಳು ಪ್ರಭಾವಿಗಳ ಮೂಲಕ ಸಿಎಂ ಮೇಲೆ ಹಾಕಿದ ನಿರಂತರ ಒತ್ತಡದ ಪರಿಣಾಮದಿಂದ ಚೆನ್ನಣ್ಣನವರ್ ಶಿವಮೊಗ್ಗದಿಂದ 1 ವರ್ಷ 5 ತಿಂಗಳ ಅವಧಿಯಲ್ಲಿಯೇ ವರ್ಗಾವಣೆಯಾಗುವಂತಾಗಿದೆ. ಎಸ್ಪಿ ವರ್ಗಾವಣೆ ಬಗ್ಗೆ ಬಿಜೆಪಿ ಸೇರಿದಂತೆ ಇತರ ಪಕ್ಷಗಳು ಜಾಣ ವೌನಕ್ಕೆ ಶರಣಾಗಿವೆ. ಕಡಿವಾಣ

     

 : 2015ರ ಫೆ.ತಿಂಗಳಲ್ಲಿ ಪಿಎಫ್‌ಐ ಸಂಘಟನೆ ರ್ಯಾಲಿಯ ವೇಳೆ ನಡೆದ ಹಿಂಸಾಚಾರದಿಂದ ಶಿವಮೊಗ್ಗದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿತ್ತು. ಹಿಂಸಾಚಾರದಲ್ಲಿ ಇಬ್ಬರು ಬಲಿಯಾಗಿ, ಹಲವರು ಗಾಯಗೊಂಡಿದ್ದರು. ಕರ್ಫ್ಯೂ ಹಾಕಲಾಗಿತ್ತು. ಹಲವು ದಿನಗಳ ಕಾಲ ನಿಷೇಧಾಜ್ಞೆ ಹೇರಲಾಗಿತ್ತು. ವಿವಿಧ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು ನಗರಕ್ಕೆ ಆಗಮಿಸಿದರೂ ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಹಿಂಸಾಚಾರ ತಡೆಗಟ್ಟಲು ಸಾಧ್ಯವಾಗಿರಲಿಲ್ಲ. ಇಂತಹ ಸಂದಭರ್ದಲ್ಲಿ ಸಿಎಂ ಸಿದ್ದರಾಮಯ್ಯನವರು ಹಾಸನ ಜಿಲ್ಲಾ ಎಸ್ಪಿಯಾಗಿದ್ದ ರವಿ ಡಿ. ಚೆನ್ನಣ್ಣನವರ್‌ರನ್ನು ಶಿವಮೊಗ್ಗ ಎಸ್ಪಿಯಾಗಿ ನೇಮಿಸಿದ್ದರು. ಚೆನ್ನಣ್ಣನವರ್ ಸಆಗಮಿಸಿದ ಕೆಲವೇ ದಿನಗಳಲ್ಲಿ ಶಿವಮೊಗ್ಗ ನಗರದಲ್ಲಿ ಬೀಡುಬಿಟ್ಟಿದ್ದ ಸಮಾಜಘಾತುಕ ಶಕ್ತಿಗಳು ಹಾಗೂ ಕ್ರಿಮಿನಲ್ಸ್‌ಗಳ ವಿರುದ್ಧ ಅಕ್ಷರಶಃ ಸಮರ ಸಾರಿದ್ದರು. ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿ ಕ್ರಿಮಿನಲ್ಸ್‌ಗಳ ನಿದ್ದೆಗೆಡಿಸಿದ್ದರು. ಆಗಮಿಸಿದ ಕೆಲವೇ ದಿನಗಳಲ್ಲಿ ನಗರದಲ್ಲಿ ಶಾಂತಿಯ ವಾತಾವರಣ ನೆಲೆಸಿತ್ತು. ಎಸ್ಪಿ ಭಯಕ್ಕೆ ಕ್ರಿಮಿನಲ್ಸ್ ಗಳು ಊರು ತೊರೆಯುವಂತಾಗಿತ್ತು. ಒಟ್ಟಾರೆ ರವಿ ಡಿ. ಚೆನ್ನಣ್ಣನವರ್‌ರವರನ್ನು ದಿಢೀರ್ ಆಗಿ ಶಿವಮೊಗ್ಗದಿಂದ ವರ್ಗಾವಣೆಗೊಳಿಸಿರುವುದು ಜಿಲ್ಲೆಯಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ವರ್ಗಾವಣೆ ಖಂಡಿಸಿ ದಸಂಸದಿಂದ ಮನವಿ

ಸಾಗರ : ಜಿಲ್ಲೆಯ ನಿಷ್ಠಾವಂತ ಜಿಲ್ಲಾ ರಕ್ಷಣಾಧಿಕಾರಿ ರವಿ ಡಿ. ಚೆನ್ನಣ್ಣನವರ್ ಅವರನ್ನು ದಿಢೀರ್ ವರ್ಗಾವಣೆ ಮಾಡಿರುವ ಕ್ರಮವನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಶಿವಾನಂದ ಕುಗ್ವೆ, 18 ತಿಂಗಳ ಹಿಂದೆ ಶಿವಮೊಗ್ಗ ಜಿಲ್ಲೆಗೆ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬಂದಿದ್ದ ರವಿ ಡಿ. ಚೆನ್ನಣ್ಣನವರ್ ಅವರನ್ನು ಸರಕಾರ ಏಕಾಏಕಿ ವರ್ಗಾವಣೆ ಮಾಡಿರುವ ಕ್ರಮ ಖಂಡನೀಯ. ಹಿಂದೆ ಶಿವಮೊಗ್ಗ ಜಿಲ್ಲೆಯಲ್ಲಿ ಮತೀಯ ಘರ್ಷಣೆ, ಕಾನೂನುಬಾಹಿರ ಚಟುವಟಿಕೆ, ಗೂಂಡಾಗಿರಿ ಇನ್ನಿತರ ಚಟುವಟಿಕೆಗಳು ಹೆಚ್ಚಿದ್ದಾಗ ವರ್ಗಾವಣೆಯಾಗಿ ಬಂದ ರವಿ ಡಿ. ಚೆನ್ನಣ್ಣನವರ್ ಅದನ್ನು ಮಟ್ಟ ಹಾಕಿ ಜಿಲ್ಲೆಯಲ್ಲಿ ಶಾಂತಿ ನೆಲೆಸುವಂತೆ ಮಾಡಿದ್ದರು. ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವರು ವರ್ಗಾವಣೆಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು. ಟಿಪ್ಪು ಸಹಾರ ಯುವಜನ ಸಂಘದ ತಾಲೂಕು ಅಧ್ಯಕ್ಷ ಸೈಯ್ಯದ್ ಜಮೀಲ್ ಮಾತನಾಡಿ, ರಾಜ್ಯ ಸರಕಾರ ಎಸ್ಪಿ ಅವರ ವರ್ಗಾವಣೆಯನ್ನು ತಕ್ಷಣ ರದ್ದುಗೊಳಿಸಬೇಕು. ಅವರಿಗೆ ಜಿಲ್ಲೆಯಲ್ಲಿ ಇನ್ನಷ್ಟು ಕಾಲ ಸೇವೆ ಸಲ್ಲಿಸಲು ಅವಕಾಶ ಮಾಡಬೇಕು ಎಂದು ಒತ್ತಾಯಿಸಿದರು. ದಲಿತ ಸಂಘರ್ಷ ಸಮಿತಿ ರೇವಪ್ಪ ಹೊಸಕೊಪ್ಪ, ವೆಂಕಟೇಶ್ ಕವಲಕೋಡು, ಅಣ್ಣಪ್ಪ, ಪುಟ್ಟಸ್ವಾಮಿ, ನಾರಾಯಣ ಅರಮನೆಕೇರಿ, ಪರಿಮಳ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News