×
Ad

ಶಿವಮೊಗ್ಗ ಜಿಲ್ಲಾದ್ಯಂತ ಭುಗಿಲೆದ್ದ ಆಕ್ರೋಶ

Update: 2016-08-23 22:11 IST

ಶಿವಮೊಗ್ಗ, ಆ.23: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನವರ್ ಅವರನ್ನು ದಿಢೀರ್ ಆಗಿ ಶಿವಮೊಗ್ಗದಿಂದ ವರ್ಗಾವಣೆಗೊಳಿಸಿದ ರಾಜ್ಯ ಸರಕಾರದ ಆದೇಶಕ್ಕೆ ಶಿವಮೊಗ್ಗದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮಂಗಳವಾರ ವಿವಿಧ ಸಂಘಟನೆಗಳು, ಪ್ರಗತಿಪರ ಮುಖಂಡರು, ನಾಗರಿಕರು, ಮಹಿಳೆಯರು ಸ್ವಯಂಪ್ರೇರಿತರಾಗಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ರವಿ ಡಿ. ಚೆನ್ನಣ್ಣನವರ್ ಅವರ ವರ್ಗಾವಣೆ ರದ್ದುಗೊಳಿಸುವಂತೆ ಮುಖ್ಯಮಂತ್ರಿಯನ್ನು ಆಗ್ರಹಿಸಿದರು. ಮಧ್ಯಾಹ್ನದವರೆಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸುಮಾರು 12 ಕ್ಕೂ ಅಧಿಕ ಸಂಘಟನೆಗಳು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದವು. ಜಿಲ್ಲಾಧಿಕಾರಿ ಕಚೇರಿಯ ಆವರಣವು ಪ್ರತಿಭಟನಾಕಾರರಿಂದ ತುಂಬಿ ತುಳುಕುತ್ತಿತ್ತು. ವಿವಿಧ ಸಂಘಟನೆಗಳ ನೂರಾರು ಜನರು ಕಚೇರಿ ಆವರಣದಲ್ಲಿ ಜಮಾಯಿಸಿದ್ದರು. ಇದು ಜನಮಾನಸದಲ್ಲಿ ಚೆನ್ನಣ್ಣನವರ್ ಅವರು ಸಂಪಾದಿಸಿದ್ದ ಜನಪ್ರಿಯತೆಗೆ ಸಾಕ್ಷಿಯಾಗಿತ್ತು. ಹಲವು ಸಂಘಟನೆಗಳು ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ರ್ಯಾಲಿ ನಡೆಸುವ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದವು. ಮತ್ತೆ ಕೆಲವು ಸಂಘಟನೆಗಳು ಪ್ರಮುಖ ವೃತ್ತಗಳಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆಯನ್ನು ನಡೆಸಿದವು.

 ಪ್ರಗತಿ ಪರ ಸಂಘಟನೆಗಳ ಮುಖಂಡರಾದ ಕೆ.ಎಲ್. ಅಶೋಕ್, ಎಂ.ಗುರುಮೂರ್ತಿ, ಕೆ.ಪಿ. ಶ್ರೀಪಾಲ್ ನೇತೃತ್ವದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು ಡಿ.ಸಿ. ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದವು. ಅಲ್ಲದೆ, ಜೆಡಿಎಸ್‌ನ ಮುಖಂಡರು ಸೇರಿದಂತೆ ಮಹಾನಗರ ಪಾಲಿಕೆಯ ಕಾರ್ಪೊರೇಟರ್‌ಗಳಾದ ನಾಗರಾಜ್ ಕಂಕಾರಿ, ಪಾಲಾಕ್ಷಿ, ಯುವ ಮುಖಂಡ ಶ್ರೀನಿವಾಸ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕಾರ್ಯನಿಮಿತ್ತ ಡಿ.ಸಿ. ಕಚೇರಿಗೆ ಆಗಮಿಸಿದ್ದ ಬಿಜೆಪಿ ಪಕ್ಷದ ವಿಧಾನ ಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್ ಅವರೂ ಸಂಘಟನೆಗಳು ನಡೆಸುತ್ತಿದ್ದ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಭಾಗಿಯಾಗಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯನಿಮಿತ್ತ ಡಿ.ಸಿ. ಕಚೇರಿಗೆ ಆಗಮಿಸಿದ್ದೆ. ಇಲ್ಲಿ ನೆರೆದಿರುವ ಜನಸ್ತೋಮ ನೋಡಿ ತಾವು ಕೂಡ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಆಗಮಿಸಿದ್ದೇನೆ. ಎಸ್ಪಿ ರವಿ ಡಿ. ಚೆನ್ನಣ್ಣನವರ್ ಅವರ ವರ್ಗಾವಣೆ ಸರಿಯಲ್ಲ. ತಕ್ಷಣವೇ ರದ್ದುಪಡಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿಯೊಂದಿಗೆ ಸಮಾಲೋಚನೆ ನಡೆಸಬೇಕು ಎಂದು ಆಗ್ರಹಿಸಿದರು.

‘ಕಾರ್ಯ ನಿರ್ವಹಣೆ ತೃಪ್ತಿ ತಂದಿದೆ’:ಶಿವಮೊಗ್ಗದ ಸೇವೆ ತೃಪ್ತಿ ತಂದಿದೆ. ಅಖಿಲ ಭಾರತೀಯ ಪೊಲೀಸ್ ಸೇವೆಯ ಅಧಿಕಾರಿಯಾಗಿರುವುದರಿಂದ ಎಲ್ಲೆಡೆ ಸೇವೆಗೆ ಸಿದ್ಧನಾಗಿರಬೇಕಾಗುತ್ತದೆ. ಹಾಗಾಗಿ ವರ್ಗಾವಣೆ ಬಗ್ಗೆ ಬೇಸರವಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನವರ್‌ರವರು ತಿಳಿಸಿದ್ದಾರೆ. ಮಂಗಳವಾರ ನಗರದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ತಮ್ಮ ವರ್ಗಾವಣೆಯ ಬಗ್ಗೆ ಯಾರೂ ಅನರ್ಥ ಮತ್ತು ತಪ್ಪು ಕಲ್ಪನೆಗಳನ್ನು ಹಬ್ಬಿಸಬಾರದು. ಮೈಸೂರಿಗೆ ವರ್ಗಾವಣೆ ಮಾಡುವ ಮುನ್ನ ಅಭಿಪ್ರಾಯ ಕೇಳಲಾಗಿತ್ತು. ಈ ವರ್ಗಾವಣೆಗೆ ಮನಃಪೂರ್ವಕ ಒಪ್ಪಿಗೆ ಇದೆ ಎಂದು ಹೇಳಿದ್ದಾರೆ. ಶಿವಮೊಗ್ಗದಲ್ಲಿ ಒಂದೂವರೆ ವರ್ಷ ಕಾಲ ಅತ್ಯುತ್ತಮ ಕೆಲಸ ಮಾಡಿದ ತೃಪ್ತಿ ಇದೆ. ನಾಲ್ಕು ವರ್ಷಗಳಲ್ಲಿ ಮಾಡಬಹುದಾದ ಕೆಲಸವನ್ನು ತಾನು ಮಾಡಿದ್ದೇನೆ. ಈ ಎಲ್ಲಾ ಸಾಧನೆಗೆ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು, ವಿವಿಧ ಸಂಘಟನೆಗಳು, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾಕಷ್ಟು ಸಹಕಾರ ನೀಡಿದ್ದಾರೆ ಎಂದರು.

ಮೂರು-ನಾಲ್ಕು ದಿನಗಳಲ್ಲಿ ಮೈಸೂರಿಗೆ ತೆರಳಿ ಅಧಿಕಾರ ವಹಿಸಿಕೊಳ್ಳುವ ಸುಳಿವು ನೀಡಿದ ಅವರು, ಇಲ್ಲಿಗೆ ಆಗಮಿಸಲಿರುವ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ ತನ್ನ ಆತ್ಮೀಯ ಮಿತ್ರರಾಗಿದ್ದು, ಒಳ್ಳೆಯ ಅಧಿಕಾರಿಯಾಗಿದ್ದಾರೆ. ಎಲ್ಲರೂ ಅವರಿಗೆ ಉತ್ತಮ ರೀತಿಯ ಸಹಕಾರ ನೀಡಬೇಕೆಂದು ವಿನಂತಿಸಿದರು.

ಅಕ್ರಮಗಳಿಗೆ ಸಂಪೂರ್ಣ ಕಡಿವಾಣ:  2015ರ ಫೆಬ್ರವರಿಯಲ್ಲಿ ಶಿವಮೊಗ್ಗದಲ್ಲಿ ನಡೆದ ಗಲಭೆಯ ವೇಳೆ ಶಿವಮೊಗ್ಗ ಜಿಲ್ಲಾ ಎಸ್ಪಿಯಾಗಿ ಆಗಮಿಸಿದ ರವಿ ಡಿ. ಚೆನ್ನಣ್ಣನವರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಎಲ್ಲ ರೀತಿಯ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಜಿಲ್ಲೆಯಾದ್ಯಂತ ಶಾಂತಿ ನೆಲೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ವಿವಿಧ ಸರಕಾರಿ ಇಲಾಖೆಗಳು ರೂಪಿಸಿರುವ ಯೋಜನೆಗಳು ಹಾಗೂ ಸೌಲಭ್ಯಗಳ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ನೀಡಲು ಪ್ರತ್ಯೇಕ ಪುಸ್ತಕ ತಂದಿರುವ ಇವರು, ಐಎಎಸ್-ಐಪಿಎಸ್ ಆಕಾಂಕ್ಷಿಗಳಿಗೆ ಉಚಿತವಾಗಿ ತರಬೇತಿ ಶಿಬಿರ ಹಮ್ಮಿಕೊಂಡು ಉನ್ನತ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದರು. ಇಂತಹ ದಕ್ಷ - ಪ್ರಾಮಾಣಿಕ ಅಧಿಕಾರಿಯನ್ನು ದಿಢೀರ್ ಆಗಿ ವರ್ಗಾವಣೆ ಮಾಡಿರುವುದು ಸರಿಯಲ್ಲ. ಮುಖ್ಯಮಂತ್ರಿಗಳು ತಕ್ಷಣವೇ ಈ ಆದೇಶ ರದ್ದುಗೊಳಿಸಿ ಅವರನ್ನು ಶಿವಮೊಗ್ಗದಲ್ಲಿಯೇ ಮುಂದುವರಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹಾಗೂ ಕೋಮು ಸೌಹಾರ್ದ ವೇದಿಕೆ ಆಗ್ರಹಿಸಿದೆ.

ವರ್ಗಾವಣೆ ಸರಿಯಲ: ಜಿಲ್ಲಾ ರಕ್ಷಣಾಧಿಕಾರಿ ರವಿ ಡಿ. ಚೆನ್ನಣ್ಣನವರ್‌ಅವರು ಸರಳ-ಸಜ್ಜನಿಕೆಯ, ಸಾಮಾಜಿಕ ಕಾಳಜಿಯುಳ್ಳ ಅಪರೂಪದ ಅಧಿಕಾರಿ. ಅವರು ಜಿಲ್ಲೆಗೆ ಆಗಮಿಸಿದ ಬಳಿಕ ಯಾವುದೇ ಒತ್ತಡಕ್ಕೆ ಮಣಿಯದೆ ಎಲ್ಲ ರೀತಿಯ ಅಕ್ರಮ, ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಮಾಫಿಯಾಗಳ ಸದ್ದಡಗಿಸುವ ಕೆಲಸ ಆರಂಭಿಸಿದ್ದಾರೆ. ಪ್ರಸ್ತುತ ಗಣೇಶ ಹಬ್ಬ ಸಮೀಪಿಸುತ್ತಿದ್ದು ಶಾಂತಿ, ಸುವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಕಾಯ್ದು ಕೊಳ್ಳಲು ಎಸ್ಪಿಯವರ ಆವಶ್ಯಕತೆ ಜಿಲ್ಲೆಗಿದೆ. ಈ ಹಿನ್ನೆಲೆಯಲ್ಲಿ ಮೈಸೂರಿಗೆ ವರ್ಗಾವಣೆಗೊಳಿಸಿರುವ ಆದೇಶ ರದ್ದುಪಡಿಸಬೇಕು ಎಂದು ಸಮಗ್ರ ಕರ್ನಾಟಕ ಜನಪರ ನಾಗರಿಕ ಹಕ್ಕು ಸಂಘ ಮುಖ್ಯಮಂತ್ರಿಯವರನ್ನು ಆಗ್ರಹಿಸಿದೆ.

ಜಿಲ್ಲೆಯಲ್ಲೇ ಮುಂದುವರಿಸಿರವಿ ಡಿ. ಚೆನ್ನಣ್ಣನವರ್ ಅವರು ದಕ್ಷತೆ- ಪ್ರಾಮಾಣಿ ಕತೆಯಿಂದ ಕೆಲಸ ಮಾಡುತ್ತಿದ್ದಾರೆ. ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಕ್ರಿಮಿನಲ್ ವಿರುದ್ಧ ಕಠಿಣ ಕ್ರಮ ಜರಗಿಸುತ್ತಿದ್ದಾರೆ. ನಾಗರಿಕರೊಂದಿಗೆ ನಿರಂತರ ಸಮಾಲೋಚನೆ ನಡೆಸುವ ಮೂಲಕ ಕಾನೂನು-ಸುವ್ಯವಸ್ಥೆಗೆ ಸಂಬಂಧಿಸಿದ ಮಾಹಿತಿ ಕಲೆ ಹಾಕುತ್ತಿದ್ದಾರೆ. ನಾಗರಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಜನಸ್ನೇಹಿ ಐಪಿಎಸ್ ಅಧಿಕಾರಿಯನ್ನು ವರ್ಗಾಯಿಸಬಾರದು ಎಂದು ಸಂಘ ಸಂಸ್ಥೆಗಳು ಹಾಗೂ ನಾಗರಿಕರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News