×
Ad

ಜನಸಾಮಾನ್ಯ ಅಧಿಕಾರಿಯಿಂದ ಸಮಸ್ಯೆ ಪರಿಹಾರ ಸಾಧ್ಯ

Update: 2016-08-23 22:13 IST

ಶಿವಮೊಗ್ಗ, ಆ. 23: ಉತ್ತಮ ಸೇವೆ ಮಾಡುವ ಅಧಿಕಾರಿಯನ್ನು ಜನ ಹೃದಯದಲ್ಲಿಟ್ಟುಕೊಳ್ಳುತ್ತಾರೆ. ಸದಾಕಾಲ ನೆನಪಲ್ಲಿಟ್ಟುಕೊಳ್ಳುತ್ತಾರೆ. ಜನಸಾಮಾನ್ಯನ ಮಧ್ಯೆ ಬೆಳೆದು ಬಂದ ಅಧಿಕಾರಿಗೆ ಮಾತ್ರ ಸಾರ್ವಜನಿಕರ ಸಮಸ್ಯೆ ಹಾಗೂ ತುಡಿತಕ್ಕೆ ಸ್ಪಂದಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ವಿ. ಪಿ. ಇಕ್ಕೇರಿ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ನಗರದ ಡಿಎಆರ್ ಮೈದಾನ ಆವರಣದ ಕಾಂಪ್ಲೆಕ್ಸ್‌ನಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಆರಂಭಿಸಲಾಗಿರುವ ವಿನೂತನ ಕಾಪ್ಸ್ ಕೆಫೆೆ, ಮೆಡಿಕಲ್ ಶಾಪ್ ಮತ್ತು ಬೇಕರಿ ಉದ್ಘಾಟಿಸಿ ಬಳಿಕ ನಡೆದ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು. ಉತ್ತಮ ಅಧಿಕಾರಿ ಯಾವುದೇ ಜಿಲ್ಲೆಗೆ ಹೋದಾಗ ತೆರೆದ ಮನಸ್ಸಿನಿಂದ ಸ್ವಾಗತಿಸುತ್ತಾರೆ. ನಂತರ ಆ ಅಧಿಕಾರಿ ಮಾಡುವ ಕೆಲಸದ ಆಧಾರದ ಮೇಲೆ ಸ್ಥಾನ ನೀಡುತ್ತಾರೆ. ಪೊಲೀಸ್ ಸಿಬ್ಬಂದಿಯ ಪರವಾಗಿ ಅಪಾರ ಕಾಳಜಿ ಹೊಂದಿರುವ ಎಸ್ಪಿ ರವಿ ಡಿ. ಚೆನ್ನಣ್ಣನವರ್ ಜಿಲ್ಲೆಯ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಇದರ ಮೂಲಕ ಎಲ್ಲಾ ಸಿಬ್ಬಂದಿಯ ಮನಗೆದ್ದಿದ್ದಾರೆ ಎಂದರು. ಜಿಲ್ಲಾ ಪೊಲೀಸ್ ವರಿಷ್ಠ ರವಿ ಡಿ. ಚೆನ್ನಣ್ಣನವರ್ ಮಾತನಾಡಿ, ತಮ್ಮ ಬಹುತೇಕ ಕನಸು ಪೊಲೀಸ್ ಸಿಬ್ಬಂದಿಯ ಪರವಾಗಿತ್ತು. ಇತ್ತೀಚೆಗೆ ನಡೆದ ಪೊಲೀಸ್ ಸಿಬ್ಬಂದಿಯ ಬಂದ್ ವಿಚಾರದ ಸಂಬಂಧ ಸಿಬ್ಬಂದಿಯ ಜೊತೆ ಮಾತನಾಡಿದಾಗ ತಮಗಿರುವ ಸಂಕಷ್ಟಗಳನ್ನು ತೋಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕೂಡಲೇ ಕಾರ್ಯಪ್ರವೃತ್ತನಾಗುವ ಮೂಲಕ ಹಲವಾರು ಬೇಡಿಕೆಗಳನ್ನು ಈಡೇರಿಸಲಾಗಿದೆ ಎಂದರು.

ತನ್ನ ಕೆಲಸದ ಬಗ್ಗೆ ಸಾಕಷ್ಟು ಪ್ರಸಂಶೆಗಳು ಬಂದಿವೆ. ತಪ್ಪನ್ನು ಎತ್ತಿತೋರಿಸಿದವರೂ ಇದ್ದಾರೆ. ಅವುಗಳನ್ನು ತಿದ್ದುಕೊಳ್ಳುವ ಕೆಲಸವನ್ನು ಮಾಡಿದ್ದೇನೆ. ಯಾವತ್ತೂ ವ್ಯಕ್ತಿಯನ್ನು ಪ್ರಶಂಸಿಸಬಾರದು. ಆತನ ಕೆಲಸವನ್ನು ಮಾತ್ರ ಹೊಗಳಬೇಕು. ಇಲ್ಲವಾದಲ್ಲಿ ಆತ ಸರ್ವಾಧಿಕಾರಿಯಾಗುವ ಸಾಧ್ಯತೆ ಹೆಚ್ಚು ಎಂದು ಅಭಿಪ್ರಾಯಿಸಿದ ಅವರು, ಆದ್ದರಿಂದ ತನ್ನ ತಪ್ಪುಗಳನ್ನು ಎತ್ತಿತೋರಿಸಿದ ಎಲ್ಲರನ್ನು ತಾನು ಸದಾ ಸ್ಮರಿಸುವುದಾಗಿ ತಿಳಿಸಿದರು.

ಜಿಪಂ ಸಿಇಒ ರಾಕೇಶ್ ಕುಮಾರ್ ಮಾತನಾಡಿ, ರವಿಯವರು ಕ್ರಿಯಾಶೀಲ ಮತ್ತು ಅಭಿವೃದ್ಧಿ ಕನಸಿನ ಯುವಕ. ಸದಾ ಚಿಂತನೆಯಲ್ಲಿರುವವರು. ತಮ್ಮ ಕನಸುಗಳನ್ನು ಸಾಕಾರಗೊಳಿಸುವಲ್ಲಿ ಅವರು ಎಂದಿಗೂ ಹಿಂದೆ ಬೀಳಲಿಲ್ಲ ಎಂದು

 ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಆರಂಭಿಸಲಾಗಿರುವ ಹೋಟೆಲ್, ಬೇಕರಿ ಹಾಗೂ ಮೆಡಿಕಲ್ ಶಾಪ್‌ನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಕೇಶ್ ಕುಮಾರ್ ಉದ್ಘಾಟಿಸಿದರು. ಸಮಾರಂಭದಲ್ಲಿ ನಿವೇದನ್ ನೆಂಪೆ, ನಿವೃತ್ತ ಪೊಲೀಸ್ ನೌಕರರ ಸಂಘದ ಅಧ್ಯಕ್ಷ ಕೃಷ್ಣಾರೆಡ್ಡಿ, ಹೋಂಗಾರ್ಡ್ಸ್ ಕಮಾಂಡೆಂಟ್ ಶಿವಕುಮಾರ್, ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ನಾಗಪ್ಪ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News