×
Ad

‘ಗುಣಮಟ್ಟದ ಆಹಾರ ಪೂರೈಕೆಗೆ ಆದ್ಯತೆ ನೀಡಿ’

Update: 2016-08-23 22:15 IST

ಮಡಿಕೇರಿ ಆ.23: ಅಂಗನವಾಡಿಯ ಮಕ್ಕಳಿಗೆ ಗುಣಮಟ್ಟದ ಆಹಾರ ಪೂರೈಕೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ವಿನ್ಸೆಂಟ್ ಡಿಸೋಜ ಅವರು ನಿರ್ದೇಶನ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಪೂರಕ ಪೌಷ್ಟಿಕ ಆಹಾರ ಮೇಲ್ವಿಚಾರಣೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಂಗನವಾಡಿ ಮಕ್ಕಳು ಸೇರಿದಂತೆ ಗರ್ಭಿಣಿಯರು, ಬಾಣಂತಿಯರು, ಕಿಶೋರಿಯರಿಗೆ ಗುಣಮಟ್ಟದ ಆಹಾರ ಪೂರೈಕೆ ಮಾಡಬೇಕು. ಜೊತೆಗೆ ಅಪೌಷ್ಟಿಕತೆಯಿಂದ ಕೂಡಿರುವ ಮಕ್ಕಳಿಗೆ ಮೊಟ್ಟೆ, ಹಾಲು ಪೂರೈಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಅಂಗನವಾಡಿ ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಿಸುವುದು, ಅಂಗನವಾಡಿಗಳಲ್ಲಿ ಕೈತೋಟ ನಿರ್ಮಿಸಿ ಹಣ್ಣು ಮತ್ತು ತರಕಾರಿ ಬೆಳೆಯುವ ಜೊತೆಗೆ ಉನ್ನತೀಕರಣಕ್ಕೆ ಸೂಚಿಸಿದ್ದಾರೆ.

 ಸದಸ್ಯ ಕಾರ್ಯದರ್ಶಿ ರವೀಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಒ.ಆರ್.ಶ್ರೀರಂಗಪ್ಪ, ಸಿಡಿಪಿಒಗಳಾದ ಶಾರದಾ, ದಮಯಂತಿ, ಸರಳ, ಮಣಿ, ವಿಕಲಚೇತನ ಅಧಿಕಾರಿ ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ನಗರದ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲೆಯಲ್ಲಿ 848 ಅಂಗನವಾಡಿಗಳಿದ್ದು, 693 ಸ್ವಂತ ಅಂಗನವಾಡಿಗಳಿವೆ. 126 ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಜಿಲ್ಲೆಯಲ್ಲಿ 6 ತಿಂಗಳಿನಿಂದ ಆರು ವರ್ಷದ ವರೆಗೆ ಸುಮಾರು 22 ಸಾವಿರ ಮಕ್ಕಳು, 7, 423 ಗರ್ಭಿಣಿ/ಬಾಣಂತಿಯರು, 147 ಅಪೌಷ್ಟಿಕತೆಯಿಂದ ಕೂಡಿರುವ ಮಕ್ಕಳು ಮತ್ತು 11 ರಿಂದ 18 ವರ್ಷದೊಳಗಿನ ಹೆಣ್ಣು ಮಕ್ಕಳು ಸುಮಾರು 2,200 ಮಂದಿ ಇದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಾಗರಾಜು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News