ಮಾಜಿ ಸಂಸದೆ ರಮ್ಯಾ ಪರ ನಿಂತ ದೇವೇಗೌಡ
ಬೆಂಗಳೂರು/ಹೊಸದಿಲ್ಲಿ, ಆ.24: ಪಾಕಿಸ್ತಾನದ ಕುರಿತು ಮಾಜಿ ಸಂಸದೆ ರಮ್ಯಾ ನೀಡಿರುವ ಹೇಳಿಕೆಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಬೆಂಬಲ ವ್ಯಕ್ತಪಡಿಸಿದ್ದಾರೆ.
ಬುಧವಾರ ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮ್ಯಾ ನೀಡಿರುವ ಹೇಳಿಕೆಯಲ್ಲಿ ಯಾವುದೆ ತಪ್ಪು ಕಾಣುತ್ತಿಲ್ಲ. ಅವರು ಈಗಾಗಲೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ ಎಂದರು.
ಪಾಕಿಸ್ತಾನದಲ್ಲೂ ಒಳ್ಳೆ ಜನರಿದ್ದಾರೆ. ಭಾರತದೊಂದಿಗೆ ಸೌಹಾರ್ದಯುತವಾದ ಸಂಬಂಧವನ್ನು ಬಯಸುತ್ತಾರೆ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಸಾರಿಗೆ ಸಂಪರ್ಕ ಕಲ್ಪಿಸಿದರು.
ಎರಡು ದೇಶಗಳ ಮೂಲಭೂತವಾದಿಗಳಿಂದ ಸಂಬಂಧ ಹದಗೆಟ್ಟಿದೆ ಎಂದು ಅವರು ಕಿಡಿಗಾರಿದರು. ರಾಜಕಾರಣಿಗಳಿಗೆ ಇರೋದು ಅಧಿಕಾರದ ಭಕ್ತಿ, ದೇಶಭಕ್ತಿಯಲ್ಲ. ತ್ರೇತಾಯುಗದ ರಾಮನ ಪಾದುಕೆ ತಂದು ರಾಜಕೀಯ ಮಾಡಿದರು. ದೇಶಾದ್ಯಂತ ರಥಯಾತ್ರೆ ಮಾಡಿದರು. ಇವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ ಎಂದು ಪರೋಕ್ಷವಾಗಿ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.