ಪೌರಾಯುಕ್ತರ ವಿರುದ್ಧ ದೂರು ನೀಡಿದ ನಗರ ಸಭಾಧ್ಯಕ್ಷೆ
ಮಡಿಕೇರಿ, ಆ.24: ನಗರಸಭೆೆಯ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡು ಸುಮಾರು 97 ಲಕ್ಷ ರೂ. ಪ್ರಾವಿಡೆಂಟ್ ಫಂಡ್ ಖಾತೆಗೆ ಜಮಾ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೌರಾಯುಕ್ತೆ ಬಿ.ಬಿ.ಪುಷ್ಪಾವತಿ ಹಾಗೂ ಆಡಿಟ್ ಸೂಪರಿಂಟೆಂಡೆಂಟ್ ಹನುಮಂತರಾಜು ನೇರ ಹೊಣೆಗಾರರೆಂದು ಆರೋಪಿಸಿ ನಗರಸಭಾ ಅಧಕ್ಷೆ ಶ್ರೀಮತಿ ಬಂಗೇರ, ಜಿಲ್ಲಾಧಿಕಾರಿ ಹಾಗೂ ಪೌರಾಡಳಿತ ಇಲಾಖೆಗೆ ದೂರು ಸಲ್ಲಿಸಿದ್ದಾರೆ.
ನಗರಸಭೆಯ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡು 97 ಲಕ್ಷ ರೂ.ನ್ನು ಪಿಎಫ್ ಖಾತೆಗೆ ವರ್ಗಾಯಿಸಿಕೊಂಡ ಗಂಭೀರ ವಿಚಾರವನ್ನು ಅಧ್ಯಕ್ಷರು ಹಾಗೂ ಸದಸ್ಯರ ಗಮನಕ್ಕೆ ತಾರದೆ ಇರುವುದನ್ನು ಬಂಗೇರ ತೀವ್ರವಾಗಿ ಆಕ್ಷೇಪಿಸಿದ್ದಾರೆ. ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರಿಗೆ ದೂರು ಸಲ್ಲಿಸಿರುವ ಅಧ್ಯಕ್ಷರು, ಪೌರಾಯುಕ್ತೆ ಪುಷ್ಪಾವತಿ ಹಾಗೂ ಆಡಿಟ್ ಸೂಪರಿಂಟೆಂಡೆಂಟ್ ಹನುಮಂತರಾಜು ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಬ್ಯಾಂಕ್ ಖಾತೆ ಮುಟ್ಟುಗೋಲು ಗೊಂಡಿರುವುದು ಮತ್ತು 97 ಲಕ್ಷ ರೂ. ಯಾರದೇ ಗಮನಕ್ಕೆ ಬಾರದೆ ಪಿಎಫ್‌ಗೆ ಜಮಾ ಆಗಿರುವುದು ಅತ್ಯಂತ ಗಂಭೀರ ಬೆಳವಣಿಗೆಯಾಗಿದೆ. ನಗರಸಭೆಯಲ್ಲಿ ಅಧ್ಯಕ್ಷರು ಸೇರಿದಂತೆ 28 ನಗರಸಭಾ ಸದಸ್ಯರಿದ್ದರೂ ಯಾರೊಬ್ಬರಿಗೂ ಈ ಬಗ್ಗೆ ಮಾಹಿತಿ ನೀಡದ ಪೌರಾಯುಕ್ತರು ಸರ್ವಾಧಿಕಾರಿ ಧೋರಣೆ ತಾಳಿದ್ದಾರೆ. ಒಂದು ವಿವಾದಿತ ಪ್ರಕರಣವನ್ನು ತಾವೇ ನಿಭಾಯಿಸುವುದಕ್ಕಾಗಿ ಜನಪ್ರತಿನಿಧಿಗಳನ್ನು ಕತ್ತಲೆಯಲ್ಲಿಟ್ಟು ತೆರೆಮರೆಯ ಪ್ರಯತ್ನ ನಡೆಸಿದ್ದಾರೆ. ಈ ಮೂಲಕ ನಗರಸಭೆಗೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿರುವ ಶ್ರೀಮತಿ ಬಂಗೇರ, ಜಿಲ್ಲಾಧಿಕಾರಿ ಹಾಗೂ ಪೌರಾಡಳಿತ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಮನವಿ ಮಾಡಿದ್ದಾರೆ.