×
Ad

ಅಭಿವೃದ್ಧಿ ಇಲಾಖೆಗಳು ರೈತರ, ಸಾರ್ವಜನಿಕರ, ಸ್ನೇಹಪರ ಇಲಾಖೆಗಳಾಗಿ ಕಾರ್ಯ ನಿರ್ವಹಿಸಲಿ: ಕವಿತಾ ಲಿಂಗರಾಜು

Update: 2016-08-24 22:01 IST

ತರೀಕೆರೆ, ಆ.24: ಕೃಷಿಗೆ ಸಂಬಂಧಪಟ್ಟ ಅಭಿವೃದ್ಧಿ ಇಲಾಖೆಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಣೆ ಮಾಡಿ ಯೋಜನೆಗಳನ್ನು ರೂಪಿಸುವಾಗ ಅದರ ಲಾಭ ಜನತೆಗೆ ಆಗುತ್ತದೆಯೇ ಎಂದು ಪರಾಮರ್ಷಿಸಿ ನಂತರ ಅನುಷ್ಠಾನಗೊಳಿಸಬೇಕು ಎಂದು ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಲಿಂಗರಾಜು ಅಧಿಕಾರಿಗಳಿಗೆ ತಿಳಿಸಿದರು.

ಸಮಿತಿ ಲಿಂಗದಹಳ್ಳಿಯ ಕೃಷಿ ತರಬೇತಿ ಕೇಂದ್ರ, ತಾಪಂ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಪಶು ವೈದ್ಯಕೀಯ ಇಲಾಖೆ, ಮೀನುಗಾರಿಕೆ, ಸಾಮಾಜಿಕ ಅರಣ್ಯ ಇಲಾಖೆ ಪ್ಲಾಟೇಂಷನನ್ನು ವೀಕ್ಷಣೆ ಮಾಡಿ ನಂತರ ಅವರು ಮಾತನಾಡಿದರು. ಕೃಷಿಗೆ ಸಂಬಂಧ ಪಟ್ಟಂತೆ ಆಧುನಿಕ ತಂತ್ರಜ್ಞಾನದ ಅಳವಡಿಕೆ ಸಂಶೋಧನೆಗಳಿಂದ ಲಭ್ಯವಾಗುವ ಮಾಹಿತಿ ಆಧಾರದ ಮೇಲೆ ಕೃಷಿ ಉತ್ಪನ್ನಗಳನ್ನು ಹೆಚ್ಚಿಸುವ ಬಗ್ಗೆ ರೈತರಿಗೆ ಅರಿವು ಮೂಡಿಸುವಂತೆ ಕೃಷಿಕ ಚಿತ್ರಸೇನ ರವರಿಗೆ ಸೂಚಿಸಿದರು. ತೋಟಗಾರಿಕಾ ಇಲಾಖೆಯಲ್ಲಿ ಲಭ್ಯವಾಗುವ ಸವಲತ್ತುಗಳನ್ನು ರೈತರಿಗೆ ತಲುಪಿಸುವ ಜವಾಬ್ದಾರಿ ಹೊರಬೇಕು. ರೈತರಿಗೆ ಹನಿ ನೀರಾವರಿ ತೋಟಗಾರಿಕಾ ಬೆಳೆಗಳಿಗೆ ಸೂಕ್ತ ಸಮಯದಲ್ಲಿ ಕೀಟನಾಶಕಗಳನ್ನು ಸಿಂಪಡಿಸುವುದರ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕು, ತೋಟಗಾರಿಕೆ ಬೆಳೆಗಳ ಉತ್ಪಾದನೆ ಹೆಚ್ಚಳ ಮತ್ತು ತರಕಾರಿಗಳ ಬೆಳೆ ಬಗ್ಗೆ ಅರಿವು, ಹೈನುಗಾರಿಕೆಯನ್ನು ಉಪಕಸುಬಾಗಿ ಇಟ್ಟುಕೊಂಡು ರೈತರು ಕೋಳಿ, ಕುರಿ, ಆಡುಗಳನ್ನು ಸಾಕುವುದರ ಜೊತೆಗೆ ಕೃಷಿಗೆ ಪೂರಕವಾದ ಉಪಕಸುಬುಗಳನ್ನು ಕೈಗೊಳ್ಳಬೇಕೆಂದು ತಿಳಿಸಿದರು. ಜಿಪಂ ಹಿರಿಯ ಸದಸ್ಯ ಕೆ.ಆರ್.ಆನಂದಪ್ಪಮಾತನಾಡಿ, ವಾಸ್ತವಿಕತೆಗೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಿ, ಹಿಂದೆ ರೈತರು ಮರುಪಾವತಿ ಮಾಡದೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಬ್ಸಿಡಿ ಯೋಜನೆಗಳು ಸಹ ರೈತರಿಗೆ ತಲುಪದೆ ವಾಪಸಾದ ಘಟನೆ ಇದೆ. ಹರಿಜನ ಗಿರಿಜನ ರೈತರಿಗೆ ಶೇ.50ರಷ್ಟು ಸಹಾಯ ಧನದೊಂದಿಗೆ ಹಸುವನ್ನು ನೀಡಲಾಗುತ್ತದೆ. ಇತರೆ ಜನಾಂಗಕ್ಕೆ ಶೇ.25ರ ಸಹಾಯ ಧನದೊಂದಿಗೆ ಸರಕಾರ ಹಸುಗಳನ್ನು ನೀಡುತ್ತದೆ. ಆದರೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸಾಲ ಮರುಪಾವತಿ ಆಗದೇ ಇರುವವರಿಗೆ ಮಂಜೂರಾತಿ ನೀಡಿದರು ಸಹ ವಾಸ್ತವಿಕವಾಗಿ ಹಸುಗಳಿಗೆ ಹಣ ನೀಡುವುದಿಲ್ಲ. ರೈತರು ಸರಕಾರದ ಯೋಜನೆಗಳನ್ನು ಪಡೆಯಬೇಕಾದರೆ ಆರ್ಥಿಕ ವಿಚಾರದಲ್ಲಿ ಗಂಭೀರವಾದಂತಹ ನಿಲುವು ತೆಗೆದುಕೊಳ್ಳದೆ ಹೋದರೆ ಅವರಿಗೆ ಯಾವುದೇ ಸವಲತ್ತುಗಳು ಸಿಕ್ಕುವುದಿಲ್ಲ ಎಂಬ ಅರಿವು ಮೂಡಿಸಬೇಕು ಎಂದು ತಿಳಿಸಿದರು. ಜಂಟಿ ನಿರ್ದೇಶಕಿ ಸೀತಾ ಸುದ್ದಿಗಾರರೊಂದಿಗೆ ಮಾತನಾಡಿ, ಸರಕಾರ ಮತ್ತು ಜಿಪಂ, ತಾಪಂಗಳು ಇರುವುದು ಜನರ ಹಿತಾಸಕ್ತಿ ಕಾಪಾಡುವುದಕ್ಕಾಗಿ ಅದನ್ನು ಅತ್ಯಂತ ಸೂಕ್ಷ್ಮವಾಗಿ ಅಧಿಕಾರಿಗಳು ಅರಿತು ಕಾರ್ಯ ನಿರ್ವಹಿಸಬೇಕು ಎಂದರು. ತಾಲೂಕಿನಲ್ಲಿ ಕೃಷಿ ಚಟುವಟಿಕೆ ಸಂಬಂಧ ಪಟ್ಟಂತೆ ಆವಶ್ಯಕವಾದ ರಸಗೊಬ್ಬರ, ಕೀಟನಾಶಕಗಳು, ಮಣ್ಣು ಪರೀಕ್ಷೆ, ಯಂತ್ರೋಪಕರಣಗಳನ್ನು ಬಾಡಿಗೆಗೆ ನೀಡುವ ವ್ಯವಸ್ಥೆ ರೈತರಿಗೆ ಸಲಹಾ ಕೇಂದ್ರ, ಕೌನ್ಸೆಲಿಂಗ್, ಮುಂತಾದವುಗಳನ್ನು ಕೃಷಿ ಇಲಾಖೆ ನಿರಂತರವಾಗಿ ಮಾಡುತ್ತಿದ್ದು, ಇದರ ಲಾಭವನ್ನು ರೈತರು ಪಡೆದುಕೊಂಡು ಕೃಷಿ ಉತ್ಪನ್ನಗಳನ್ನು ಹೆಚ್ಚಿಸಿಕೊಳ್ಳಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯ ಲೋಲಾಕ್ಷಿ ಬಾಯಿ, ಅನುಸೂಯಾ ಗೋಪಿಕೃಷ್ಣ, ಸೇರಿದಂತೆ ಎಲ್ಲಾ ಇಲಾಖಾಧಿಕಾರಿಗಳು ಸಮಿತಿಯ ಜೊತೆ ಪ್ರವಾಸದಲ್ಲಿ ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News