ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಕರೆ
ಶಿವಮೊಗ್ಗ, ಆ.24: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಸೆಪ್ಟಂಬರ್ .5ರಂದು ನಡೆಯಲಿರುವ ಗಣೇಶ ಚತುರ್ಥಿಯನ್ನು ಪರಿಸರ ಸಂರಕ್ಷಿಸುವುದರ ಜೊತೆಗೆ ಪರಿಸರ ಸ್ನೇಹಿಯಾಗಿ ಆಚರಿಸಲು ಉದ್ದೇಶಿಸಿದ್ದು, ಈ ಕುರಿತು ಅರಿವು ಮೂಡಿಸಲು ಸಾರ್ವಜನಿಕರು ಹಾಗೂ ಗಣೇಶ ಮೂರ್ತಿಗಳ ತಯಾರಕರು, ಮಾರ್ಗಸೂಚಿಗಳನ್ನು ಅನುಸರಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳು ತಿಳಿಸಿದ್ದಾರೆ.
ವಿಗ್ರಹಗಳ ತಯಾರಕರು ವಿಗ್ರಹಗಳನ್ನು ಜೇಡಿಮಣ್ಣಿನಿಂದ ತಯಾರಿಸಿ, ಬಣ್ಣರಹಿತವಾಗಿ ಅಥವಾ ನೈಸರ್ಗಿಕ ಬಣ್ಣಲೇಪಿಸಿ ಮಾರುಕಟ್ಟೆಗೆ ತರಬೇಕು. ಪರಿಸರಕ್ಕೆ ಹಾನಿಕಾರಕವಾಗಿರುವ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಮಾರಾಟ ಮಾಡದಂತೆ ಸೂಚಿಸಲಾಗಿದೆ. ಬಾವಿ, ಕೆರೆಗಳಲ್ಲಿ ಗಣಪತಿ ವಿಸರ್ಜನೆ ಮಾಡಬೇಡಿ. ಹಾಗೆ ಮಾಡಿದಲ್ಲಿ ಅಂತರ್ಜಲ, ಕುಡಿಯುವ ನೀರಿನ ಸೆಲೆ ಎಲ್ಲವೂ ಹಾಳಾಗಲಿವೆ. ಬದಲಿಗೆ ಬಕೆಟ್‌ನಲ್ಲಿ, ಸಂಚಾರಿ ವಿಸರ್ಜನಾ ವಾಹನದಲ್ಲಿ ವಿಸರ್ಜಿಸಿ, ಸೂಚಿತ ಕೆರೆಗಳಲ್ಲಿ ವಿಸರ್ಜಿಸುವ ಮುನ್ನ ಹೂವು, ವಸ್ತ್ರ, ಪ್ಲಾಸ್ಟಿಕ್ ಹಾರ ಎಲ್ಲವನ್ನು ತೆಗೆಯುವಂತೆ ಅವರು ಸೂಚಿಸಿದ್ದಾರೆ.
ಗಣಪತಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸಬೇಡಿ. ಪಟಾಕಿಯ ಹೊಗೆ ವಿಷಪೂರಿತ; ಅಲ್ಲದೇ ರಸ್ತೆ ತುಂಬಾ ಕಸ ತುಂಬಿ ಮಾಲಿನ್ಯ ಉಂಟು ಮಾಡಲಿದೆ. ಅಲ್ಲದೇ ಗಡಚಿಕ್ಕುವ ಶಬ್ಧವೂ ಕೂಡ ಕಿವಿಗೆ ಹಾನಿಯನ್ನುಂಟು ಮಾಡುತ್ತದೆ. ಹಬ್ಬದಲ್ಲಿ ರಸ್ತೆ, ಚರಂಡಿಯಲ್ಲಿ ಹೂವಿನ ಹಾರ, ತಟ್ಟೆ, ಲೋಟ, ಎಲೆ ಎಸೆಯಬೇಡಿ. ಕಸದ ವಾಹನ ಬಳಸಿ ಎಂದ ಅವರು, ನಿಯಮ ಮೀರಿ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಲಾದ ವಿಗ್ರಹಗಳನ್ನು ಮಾರಾಟ ಮಾಡುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಪರಿಸರ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಕಾನೂನು ಕ್ರಮಕ್ಕೆ ಗುರಿಪಡಿಸಲಾಗುವುದು ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳು ಎಚ್ಚರಿಸಿದ್ದಾರೆ.