ಎಸ್ಪಿ ವರ್ಗಾವಣೆ ವಿರೋಧಿಸಿ ದಸಂಸದಿಂದ ಪ್ರತಿಭಟನೆ
ಶಿವಮೊಗ್ಗ, ಆ.24: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನವರ್‌ನ್ನು ಜಿಲ್ಲೆಯಿಂದ ದಿಢೀರ್ ವರ್ಗಾವಣೆ ಮಾಡಿರುವ ರಾಜ್ಯ ಸರಕಾರದ ನಿರ್ಧಾರವನ್ನು ವಿರೋಧಿಸಿ ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು. ರವಿ ಡಿ. ಚೆನ್ನಣ್ಣನವರ್ ದಲಿತ ಸಮುದಾಯದ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದರು. ಪರಿಶಿಷ್ಟ ಜಾತಿ-ಪಂಗಡ ಕುಂದು ಕೊರತೆ ಸಭೆಗಳಲ್ಲಿ ವ್ಯಕ್ತವಾಗುವ ದೂರುಗಳನ್ನು ಕಾಲಮಿತಿಯಲ್ಲಿ ಪರಿಹರಿಸಲು ಕ್ರಮ ಕೈಗೊಂಡಿದ್ದರು ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. ಚೆನ್ನಣ್ಣನವರ್ ಅವರು ಎಸ್ಪಿಯಾಗಿ ಜಿಲ್ಲೆಗೆ ಬಂದ ನಂತರ ಎಲ್ಲ ರೀತಿಯ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದರು. ಜಿಲ್ಲೆಯಾದ್ಯಂತ ಶಾಂತಿ-ಸುವ್ಯವಸ್ಥೆಯ ವಾತಾವರಣ ನೆಲೆಸುವಂತೆ ಮಾಡಿದ್ದರು. ರೌಡಿಸಂ, ಮೀಟರ್ ಬಡ್ಡಿ ದಂಧೆ, ಯುವತಿಯರು-ಮಹಿಳೆಯರಿಗೆ ಕಿರುಕುಳ ನೀಡುವ ಕಾಮುಕರ ಅಟ್ಟಹಾಸಕ್ಕೆ ಕಡಿವಾಣ, ಸಂಚಾರ ವ್ಯವಸ್ಥೆ ಸುಧಾರಣೆ ಸೇರಿದಂತೆ ಹತ್ತು ಹಲವು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದ್ದರು ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. ಎಸ್ಪಿಯವರು ದಕ್ಷತೆ-ಪ್ರಾಮಾಣಿಕತೆಯಿಂದ ಕೆಲಸ ಮಾಡುವುದರ ಜೊತೆಗೆ, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದರು. ಕ್ರಿಮಿನಲ್‌ಗಳ ವಿರುದ್ಧ ಕಠಿಣ ಕ್ರಮ ಜರಗಿಸುತ್ತಿದ್ದರು. ನಾಗರಿಕರೊಂದಿಗೆ ನಿರಂತರ ಸಮಾಲೋಚನೆ ನಡೆಸುವ ಮೂಲಕ ಕಾನೂನು-ಸುವ್ಯವಸ್ಥೆಗೆ ಸಂಬಂಧಿಸಿದ ಮಾಹಿತಿ ಕಲೆ ಹಾಕುತ್ತಿದ್ದರು ಎಂದು ಪ್ರತಿಭಟನಾಕಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ನಾಗರಿಕರು ಹಾಗೂ ದಲಿತ ಸಮುದಾಯದವರು ನೆಮ್ಮದಿಯಾಗಿ ಜೀವನ ನಡೆಸುವಂತಾಗಬೇಕಾದರೆ ಇನ್ನಷ್ಟು ದಿನಗಳ ಕಾಲ ಅವರನ್ನು ಶಿವಮೊಗ್ಗದಲ್ಲಿಯೇ ಮುಂದುವರಿಸಬೇಕು. ತಕ್ಷಣವೇ ರಾಜ್ಯ ಸರಕಾರ ರವಿ ಡಿ. ಚೆನ್ನಣ್ಣನವರ್ ಅವರ ವರ್ಗಾವಣೆ ಆದೇಶ ರದ್ದುಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಚಿನ್ನಯ್ಯ, ಕೆ.ಎ. ರಾಜಕುಮಾರ್, ಎಂ.ಪಳನಿರಾಜ್, ಎಂ.ರಂಗಪ್ಪ, ಪ್ರಕಾಶ್ ಲಿಗಾಡಿ, ನರಸಿಂಹಮೂರ್ತಿ, ಬಸವರಾಜ್ ಬೂದಿಗೆರೆ, ಕೆ.ರಂಗನಾಥ್ ಮತ್ತಿತರರು ಉಪಸ್ಥಿತರಿದ್ದರು.