ಮಕ್ಕಳಿಗೆ ಶಿಕ್ಷಣದ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ಕೊಡಿ: ಶಾಸಕ ಬಿ.ವೈ ರಾಘವೇಂದ್ರ
ಶಿಕಾರಿಪುರ, ಆ.24: ಶಿಕ್ಷಣದ ಜತೆಗೆ ಕಲೆ ಸಾಹಿತ್ಯದ ಮೂಲಕ ವಿಕಸನ, ಕೌಶಲ್ಯ ಹೆಚ್ಚಳಕ್ಕೆ ಮಹತ್ವ ನೀಡಿದಾಗ ವಿದ್ಯಾರ್ಥಿ ಪರಿಪೂರ್ಣ ವ್ಯಕ್ತಿಯಾಗಿ ಸಮಾಜದಲ್ಲಿ ಗೌರವಕ್ಕೆ ಪಾತ್ರನಾಗುತ್ತಾನೆ ಎಂದು ಶಾಸಕ ಬಿ.ವೈ ರಾಘವೇಂದ್ರ ತಿಳಿಸಿದರು.
ಬುಧವಾರ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ನಡೆದ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಮತ್ತು ಕಲಾ ಉತ್ಸವ - 2016 ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಶಕ್ತಿ ನಾಡಿನ ಬಹು ದೊಡ್ಡ ಸಂಪತ್ತು. ಉನ್ನತ ಧ್ಯೇಯ, ಮನಸ್ಥಿತಿಯ ಮೂಲಕ ಬದುಕುವಂತೆ ತಿಳಿಸಿದರು.
ದೃಶ್ಯ ಮಾಧ್ಯಮದಲ್ಲಿ ಅತೀ ಕಿರಿಯ ವಯಸ್ಸಿನ ಮಕ್ಕಳ ಸುಪ್ತ ಪ್ರತಿಭೆ, ಕಲೆ ಅನಾವರಣಕ್ಕೆ ಅವಕಾಶವಿದ್ದು, ಇದೀಗ ವೇದಿಕೆ ಜತೆಗೆ ಆರ್ಥಿಕ ಶಕ್ತಿಯಾಗಿ ರೂಪುಗೊಳ್ಳಲು ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ಸೋಲು ಗೆಲುವು ಎಲ್ಲ ಕ್ಷೇತ್ರಗಳಲ್ಲಿ ಸಹಜವಾಗಿದ್ದು, ಸಕಾರಾತ್ಮಕ ಧೋರಣೆಯ ಮೂಲಕ ಪ್ರಥಮ ಸ್ಥಾನಕ್ಕೇರಲು ಯತ್ನಿಸಿ ಎಂದು ಶುಭ ಹಾರೈಸಿದರು.
ಬಿಇಒ ಸಿದ್ದಲಿಂಗಪ್ಪ ಮಾತನಾಡಿ, ಗ್ರಾಮೀಣ ಪ್ರತಿಭೆಯನ್ನು ಪ್ರೋತ್ಸಾಹಿಸುವ ದಿಸೆಯಲ್ಲಿ ಕ್ಲಸ್ಟರ್ ಮಟ್ಟದಲ್ಲಿ ಪ್ರತಿಭಾ ಕಾರಂಜಿಯನ್ನು ಹಮ್ಮಿಕೊಳ್ಳಲಾಗಿದೆ. ತಾಲೂಕು ಮಟ್ಟದ ಅನುದಾನವನ್ನು ಬಳಸಿಕೊಂಡು ಗ್ರಾಮೀಣ ಪ್ರತಿಭೆಯನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಹಾಗೂ ಕಂಚು ಪದಕಕ್ಕೆ ಮಾತ್ರ ದೇಶ ತೃಪ್ತಿಪಟ್ಟುಕೊಳ್ಳುವಂತಾಗಿದ್ದು, ಎಲೆಮರೆಯ ಪ್ರತಿಭೆಗಳಿಗೆ ಅವಕಾಶ ದೊರೆಯುವಂತಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ವರ್ಗಾವಣೆಗೊಂಡ ಬಿಇಒ ಸಿದ್ದಲಿಂಗಪ್ಪನವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ತಾಪಂ ಅಧ್ಯಕ್ಷ ಪರಮೇಶ್ವರಪ್ಪ, ಉಪಾಧ್ಯಕ್ಷೆ ರೂಪಾ, ಪುರಸಭಾ ಸದಸ್ಯ ವಸಂತಗೌಡ, ತಾ.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಈರಾನಾಯ್ಕ, ಗೌರವಾಧ್ಯಕ್ಷ ಮಂಜಪ್ಪ, ಪ್ರಧಾನ ಕಾರ್ಯದರ್ಶಿ ಮಧುಕೇಶ್ವರ, ಜಿಲ್ಲಾ ಸಂಘದ ಉಪಾಧ್ಯಕ್ಷ ಪಾಪಯ್ಯ, ಮಾಲತೇಶ, ಶಿಕ್ಷಣ ಸಂಯೋಜಕ ಶ್ರೀಧರ್, ಜಿಪಂ ಸದಸ್ಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.