ಕೆ.ವಿ.ಕೆ.ಯಲ್ಲಿ ಅಣಬೆ ಬೇಸಾಯದ ತರಬೇತಿ ಕಾರ್ಯಕ್ರಮ
ಕುಶಾಲನಗರ, ಆ.24: ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು ಮತ್ತು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಆಸಕ್ತ ರೈತರಿಗೆ ಒಂದು ದಿನದ ಅಣಬೆ ಬೇಸಾಯದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ಅಣಬೆ ಬೇಸಾಯ ವಿಭಾಗದ ವಿಜ್ಞಾನಿ ಡಾ. ಮೀರಾ ಪಾಂಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಕೃತಿಯಲ್ಲಿ ಅಣಬೆಗಳ ಪರಿಚಯ ಮಾನವನಿಗೆ ಅವನ ಚರಿತ್ರೆಯಷ್ಟೇ ಹಳೆಯದು. ಅಣಬೆಗಳು ಸೂಕ್ಷ್ಮಜೀವಿ ಜಗತ್ತಿನಲ್ಲಿ ಶಿಲೀಂಧ್ರಗಳ ಗುಂಪಿಗೆ ಸೇರಿವೆ. ಇದನ್ನು ಹರಿತ್ತಿಲ್ಲದ ಸಸ್ಯಗಳು, ನಾಯಿಕೊಡೆಗಳು ಎಂದೆಲ್ಲಾ ಕರೆಯುತ್ತಾರೆ. ಮಾನವ ತನ್ನ ಮೂಲ ಆಹಾರಗಳಾದ ಗೆಡ್ಡೆ-ಗೆಣಸು, ಹಣ್ಣು-ಹಂಪಲುಗಳಂತೆ ತಿನ್ನಲು ಯೋಗ್ಯವಾದ ಅಣಬೆಗಳನ್ನು ತನ್ನ ಆಹಾರ ಮತ್ತು ಔಷಧೋಪಚಾರಗಳಲ್ಲಿ ಬಳಸಿ ಕೊಂಡಿದ್ದಾನೆ ಎಂದರು.
ನಮ್ಮಲ್ಲಿ ಹಲವು ವಿಧದ ಅಣಬೆಗಳು ಸ್ವಾಭಾವಿಕವಾಗಿ ಬೆಳೆಯುತ್ತವೆ. ಅವುಗಳಲ್ಲಿ ಹಲವು ವಿಷಪೂರಿತವಾದವು. ಕೆಲವು ಮಾತ್ರ ತಿನ್ನಲು ಯೋಗ್ಯವಾಗಿರುವ ಅಣಬೆಗಳು. ತಿನ್ನುವ ಅಣಬೆಗಳು ಹೆಚ್ಚು ಪೌಷ್ಟಿಕಾಂಶಗಳನ್ನು ಹೊಂದಿವೆ. ಇವುಗಳು ಹೆಚ್ಚು ಸಸಾರಜನಕ, ಮುಖ್ಯವಾದ ಜೀವಸತ್ವಗಳು ಮತ್ತು ಖನಿಜಾಂಶಗಳನ್ನು ಒಳಗೊಂಡಿವೆ. ಅಣಬೆಯಲ್ಲಿ ಸಕ್ಕರೆ ಮತ್ತು ಕೊಬ್ಬಿನ ಅಂಶ ಕಡಿಮೆ ಇರುವುದರಿಂದ ಮಧುಮೇಹ ರೋಗಿಗಳಿಗೆ ಮತ್ತು ಹೃದ್ರೋಗಿಗಳಿಗೆ ಇದು ಒಂದು ಒಳ್ಳೆಯ ಆಹಾರ ಎಂದು ತಿಳಿಸಿದರು.
ನಂತರ ಅಣಬೆ ಬೇಸಾಯ ಮಾಡುವ ಕುರಿತು ಪವರ್ ಪಾಯಿಂಟ್ ಸ್ಲೈಡ್‌ಗಳ ಮೂಲಕ ತಿಳಿಸುತ್ತಾ, ಅಣಬೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫೋಲಿಕ್ ಆಮ್ಲ ಇರುತ್ತದೆ. ಇದು ಅನೀಮಿಯಾ ನಿವಾರಕ ಗುಣವನ್ನು ಹೊಂದಿದೆ. ಅಣಬೆಯಲ್ಲಿನ ಶರ್ಕರ ಪಿಷ್ಟವು ಗೆಡ್ಡೆ ನಿರೋಧಕ ಶಕ್ತಿ ಹೊಂದಿರುವುದರಿಂದ ಇದನ್ನು ಕ್ಯಾನ್ಸರ್ ನಿೋಧಕವಾಗಿ ಬಳಸಲಾಗುತ್ತದೆ. ಅಣಬೆಯಲ್ಲಿ ಇರ್ಮ್‌ಗೊಸ್ಟಿರಾಲ್ ಎಂಬ ರಾಸಾಯನಿಕವಿದೆ. ಇದು ಮನುಷ್ಯನ ಶರೀರದಲ್ಲಿ ಡಿ ಜೀವಸತ್ವವಾಗಿ ಪರಿವರ್ತನೆಯಾಗಬಲ್ಲದು. ಅಣಬೆಯಲ್ಲಿ ನಾರಿ ನಾಂಶ ಹೆಚ್ಚಾಗಿರುವುದರಿಂದ ಮಲವಿಸರ್ಜನೆಗೆ ಸಹಾಯ ಕವಾಗುತ್ತದೆ ಎಂದು ತಿಳಿಸಿದರು. ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ಮತ್ತೋರ್ವ ಪ್ರಧಾನ ವಿಜ್ಞಾನಿ ಡಾ.ಸೆಂದಿಲ್ ಕುಮಾರನ್ ಮಾತನಾಡಿ,ಅಣಬೆ ಬೇಸಾಯಕ್ಕೆ ರೈತರ ಮಟ್ಟದಲ್ಲಿ ಉಪಯೋಗಿಸಬಹುದಾದ ಯಂತ್ರೋಪಕರಣಗಳ ಬಗ್ಗೆ ಮಾಹಿತಿ ನೀಡಿದರು.
ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞರಾದ ಡಾ.ವೀರೇಂದ್ರ ಕುಮಾರ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಅಣಬೆ ಬೇಸಾಯಕ್ಕೆ ವಿಪುಲ ಅವಕಾಶಗಳಿದ್ದು, ಅಣಬೆಯನ್ನು ತಮ್ಮ ತಮ್ಮ ಮನೆಗಳಲ್ಲಿ ಬೆಳೆಸಿ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕೆಂದರು. ಅಣಬೆ ಬೇಸಾಯಕ್ಕೆ ಬೇಕಾದ ಬೀಜವನ್ನು ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲುವಿನಲ್ಲಿ ಉತ್ಪಾದನೆ ಮಾಡಿ ವಿತರಿಸಲಾಗುವುದೆಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸಾಜೂ ಜಾರ್ಜ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಣಬೆ ಬೆಳೆಸುವ ಪ್ರಾತ್ಯಕ್ಷಿಕೆ ಯನ್ನು ನೆರೆದಿದ್ದ ರೈತರಿಗೆ ತಿಳಿಸಿಕೊಡಲಾಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಸುಮಾರು 26 ರೈತರು ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು. ತೋಟಗಾರಿಕೆ ವಿಷಯ ತಜ್ಞ ಪ್ರಭಾಕರ್ ಕಾರ್ಯಕ್ರಮ ನಿರೂಪಿಸಿದರು.