ಮಹಿಳಾ ದೌರ್ಜನ್ಯ ತಡೆಗೆ ಮುಂದಾಗಲು ಕರೆ
ದಾವಣಗೆರೆ, ಆ.24: ಮಹಿಳೆಯರ ಪರವಾಗಿ ಹಲವಾರು ಕಾನೂನುಗಳಿದ್ದರೂ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಬಿದ್ದಿಲ್ಲ. ಆದರೆ ಈ ದೌರ್ಜನ್ಯಗಳನ್ನು ಖಂಡಿಸುವ ಮೂಲಕ ಪ್ರತಿಯೊಬ್ಬರು ಅದರ ತಡೆಗೆ ಪ್ರಯತ್ನಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಸುವರ್ಣ ಕೆ.ಮಿರ್ಜಿ ಹೇಳಿದರು.
ನಗರದ ಬಾಲಕರ ಬಾಲ ಮಂದಿರದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಹಯೋಗದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಸ್ತ್ರೀ ಶಕ್ತಿ ಸಂಘದ ಮಹಿಳೆಯರಿಗೆ, ಅಂಗನವಾಡಿ ಮೇಲ್ವಿಚರಕರಿಗೆ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವುದು ವಿಷಾದಕರ ಸಂಗತಿ. ಈ ಹಿನ್ನೆಲೆ ಇಂತಹ ಪ್ರಕರಣಗಳಿಂದ ದೂರ ಉಳಿದು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮಹಿಳೆಯರಿಗೆ ಹೆಚ್ಚಾಗಿ ಕಾನೂನು ಅರಿವು ಆವಶ್ಯಕ ಎಂದು ಅಭಿಪ್ರಾಯಪಟ್ಟರು. ಲೋಕ ಅದಾಲತ್‌ನಲ್ಲಿ ಸಣ್ಣಪುಟ್ಟ ಪ್ರಕರಣಗಳನ್ನು ರಾಜಿ ಮಾಡಿಕೊಳ್ಳುವುದರಿಂದ ಕಾಲಹರಣ ತಪ್ಪುತ್ತದೆ. ಅಲ್ಲದೆ, ಇಬ್ಬರು ದೂರುದಾರರ ನಡುವಿನ ಬಾಂಧವ್ಯ ಬೆಸೆಯಲು ಸಾಧ್ಯವಾಗುತ್ತದೆ. ಹಾಗೇನಾದರು ನ್ಯಾಯಾಲಯದಲ್ಲಿ ಸಣ್ಣಪುಟ್ಟ ಪ್ರಕರಣಗಳು ಇತ್ಯರ್ಥವಾಗದಿದ್ದರೆ ಈ ಇಬ್ಬರ ನಡುವೆ ಮತ್ತಷ್ಟು ವೈ ಮನಸ್ಸು ಉಂಟಾಗುವ ಸಾಧ್ಯತೆ ಹೆಚ್ಚಾಗುತ್ತದೆ ಎಂದು ಹೇಳಿದರು. ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಯೋಗೇಶ್ ಮಾತನಾಡಿ, ನಮ್ಮ ದೇಶದಲ್ಲಿ ಮಹಿಳೆಯರ ಪರವಾಗಿ ಸಾಕಷ್ಟು ಕಾನೂನುಗಳಿದ್ದರು ಪ್ರತಿ 50 ನಿಮಿಷಕ್ಕೆ ದೌರ್ಜನ್ಯ, ಅತ್ಯಾಚಾರದಂತ ಪ್ರಕರಣಗಳು ನಡೆಯುತ್ತಿದ್ದು ಕಾನೂನಿನ ಹೋರಾಟದ ಮೂಲಕ ಮಹಿಳೆಯರ ಮೇಲೆ ಇಂತಹ ಕೃತ್ಯಗಳು ನಡೆಯದಂತೆ ಪ್ರಯತ್ನಿಸಬೇಕೆಂದರು. ನ್ಯಾಯಾಧೀಶ ದೊಗ್ಗಳ್ಳಿ ವಿಜಯಪ್ರಕಾಶ್ ಮಾತನಾಡಿ, ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯಗಳು ನಡೆದಂತಹ ಸಂದರ್ಭದಲ್ಲಿ ಪೋಷಕರು ಸಮಾಜಕ್ಕೆ ಹೆದರಿ ಪ್ರಕರಣವನ್ನು ಮುಚ್ಚಿ ಹಾಕುವುದರಿಂದ ಕಿಡಿಗೇಡಿಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗಲಿದೆ. ಕಾರಣ ಇಂತಹ ಪ್ರಕರಣಗಳಿಗೆ ಸಿಲುಕಿದ ಮಹಿಳೆಯರು ಕಾನೂನು ಹೋರಾಟ ಮಾಡಿ ಅಪರಾಧಿಗಳಿಗೆ ಶಿಕ್ಷೆಗೆ ಗುರಿಪಡಿಸಬೇಕೆಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಹಕ್ಕುಗಳ ನ್ಯಾಯಾಧೀಶ ಮಂಜಪ್ಪ ಕಾಕನೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿಜಯ ಕುಮಾರ್, ನ್ಯಾಯಾಧೀಶರಾದ ಅನಿತಾ, ಚಂದ್ರಪ್ಪ, ಮಹಾಂತೇಶ್ ಸ್ವಾಮಿ, ರಾಮಲಿಂಗಪ್ಪಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.