ಸಾಗರ: ‘ವಿದ್ಯುತ್ ವಿಚಾರ’ ಪುಸ್ತಕ ಬಿಡುಗಡೆ
ಸಾಗರ, ಆ.24: ಸಾರ್ವಜನಿಕರಿಗೆ ಅಗತ್ಯವಾದ ಮಾಹಿತಿಯನ್ನು ಗ್ರಾಹಕ ವೇದಿಕೆ ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದು ಮೆಸ್ಕಾಂ ಮಂಗಳೂರು ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕ ಕೆ.ಮಂಜಪ್ಪ ಹೇಳಿದರು. ಬ್ರಾಸಂ ಸಭಾಭವನದಲ್ಲಿ ಮಂಗಳವಾರ ಬಳಕೆದಾರರ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ‘ವಿದ್ಯುತ್ ವಿಚಾರ’ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದರು.
ವಿದ್ಯುತ್ ಕಂಪೆನಿಗಳ ನ್ಯೂನ್ಯತೆಯನ್ನು, ಮಿತಿಯನ್ನು ತಿಳಿಸಿಕೊಡುವವರ ಅಗತ್ಯವಿದೆ. ಅಂತಹ ಕೆಲಸವನ್ನು ಗ್ರಾಹಕ ವೇದಿಕೆ ಲಾಗಾಯ್ತಿನಿಂದ ಮಾಡಿಕೊಂಡು ಬರುತ್ತಿದೆ. ವಿದ್ಯುತ್ ಇಂದಿನ ಅಗತ್ಯ ಸೌಲಭ್ಯಗಳಲ್ಲಿ ಪ್ರಮುಖವಾಗಿದೆ.ವಿದ್ಯುತ್ ಮಿತವ್ಯಯವಾಗಿ ಬಳಸುವತ್ತ ಗ್ರಾಹಕರು ಚಿಂತನೆ ನಡೆಸಬೇಕು ಎಂದರು.
‘ವಿದ್ಯುತ್ ವಿಚಾರ’ ಪುಸ್ತಕದಲ್ಲಿ ಕಾನೂನಿನ ಮಾಹಿತಿ ಇದೆ. ವಿದ್ಯುತ್ ಇಲಾಖೆಯಿಂದ ಆಗುವ ಅನ್ಯಾಯಕ್ಕೆ ಸಂಬಂಧಪಟ್ಟಂತೆ ಪರಿಹಾರ ಹಾಗೂನ್ಯಾಯ ದೊರಕಿಸಿಕೊಡಲು ಪುಸ್ತಕ ಸಹಕಾರಿಯಾಗಿದೆ ಎಂದರು. ಪುಸ್ತಕದ ಲೇಖಕರು ಹಾಗೂ ವಿದ್ಯುತ್ ಸಲಹಾ ಮಂಡಳಿ ಸದಸ್ಯರು ಆದ ಕೆ.ಎನ್.ವೆಂಕಟಗಿರಿ ಮಾತನಾಡಿ, ಪುಸ್ತಕ ಪ್ರಕಟನೆಗೆ ಅಗತ್ಯ ನೆರವನ್ನು ಇಲಾಖೆ ಕಲ್ಪಿಸಿದೆ. ಪುಸ್ತಕದಲ್ಲಿ ಗ್ರಾಹಕರು ವಿದ್ಯುತ್ ಸೌಲಭ್ಯವನ್ನು ಪ್ರಾಮಾಣಿಕವಾಗಿ ಪಡೆಯುವ ಹಾಗೂ ತೊಂದರೆಯಾದಾಗ ಅದನ್ನು ಪ್ರಶ್ನಿಸುವ ಅಂಶಗಳು ಅಡಕವಾಗಿದೆ. ಸಮಸ್ಯೆ ಬಂದಾಗ ಅದನ್ನು ಸಂಘರ್ಷಕ್ಕೆ ಅವಕಾಶ ಕೊಡದಂತೆ, ಸಾಮರಸ್ಯದ ಮೂಲಕ ಬಗೆಹರಿಸುವ ಅಧಿಕಾರಿಗಳು ಮೆಸ್ಕಾಂನಲ್ಲಿ ಅಗತ್ಯವಿದ್ದಾರೆ ಎಂದರು. ಎಚ್.ಜನಾರ್ಧನ ರಾವ್ ಹಕ್ರೆ ಅವರನ್ನು ಸನ್ಮಾನಿಸಲಾಯಿತು. ಪ್ರೊ.ಅ.ರಾ.ಲಂಬೋಧರ್ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಗೋಪಾಲಕೃಷ್ಣ ಭಾರಂಗಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಡಾ. ಶ್ರೀಪಾದ ವಂದಿಸಿದರು. ರಾಮಸ್ವಾಮಿ ಕಳಸವಳ್ಳಿ ನಿರೂಪಿಸಿದರು.