ಸಮಾಜದಲ್ಲಿ ವೌಲ್ಯಗಳು ಮರೆಯಾಗುತ್ತಿವೆ: ಶಾಸಕ ನಿಂಗಯ್ಯ
ಮೂಡಿಗೆರೆ, ಆ.25: ಸಮಾಜವು ಮಹಿಳೆಯರನ್ನು ಗೌರವಿಸುವ ಕೆಲಸ ಮಾಡಬೇಕು. ಶ್ರೀ ಕೃಷ್ಣ ಪರಮಾತ್ಮನು ದ್ವಾಪರ ಯುಗದಲ್ಲಿ ಮಹಿಳೆಯರ ರಕ್ಷಣೆಗೆ ಕಂಕಣ ಬದ್ಧ್ದನಾಗಿದ್ದು, ಈ ಮೂಲಕ ಧರ್ಮ ರಕ್ಷಣೆ ಮಾಡಿದ್ದು ಎಂದು ಶಾಸಕ ಬಿ.ಬಿ.ನಿಂಗಯ್ಯ ಹೇಳಿದರು.
ಅವರು ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಸಭಾಂಗಣದಲ್ಲಿ ನಡೆದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಪುರುಷ ಸಮಾಜದಲ್ಲಿ ಹೆಚ್ಚು ಹೆಚ್ಚು ದೌರ್ಜನ್ಯವೆಸಗುತ್ತಿದ್ದು, ಹಣದ ಹಿಂದೆಯೆ ಪ್ರತಿಯೊಬ್ಬರೂ ಓಡುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಮಾಜದಲ್ಲಿ ಧರ್ಮ ಅನುಕರಣೆಯು ಮಾನವನ ಒಳಿತಿಗೆ ಸಹಕಾರಿಯಾಗಿದ್ದು, ಮಹತ್ಕಾರ್ಯಗಳನ್ನು ಸಾಧಿಸಿದ ಧೀಮಂತ ಮಹನೀಯರು ದೇವರೆಂದು ಪೂಜಿಸಲ್ಪಡುತ್ತಿದ್ದು, ಇಂತಹ ಹಲವು ಅವತಾರಗಳಲ್ಲಿ ಕೃಷ್ಣ ಅವತಾರವು ಒಂದು. ಕಲಿಯುಗದಲ್ಲಿ ಬೇಡದ ಘಟನೆಗಳಿಗೆ ಹೆಚ್ಚು ಮಹತ್ವ ನೀಡುತ್ತಿದ್ದು, ವಿಶೇಷವಾಗಿ ಹೆಣ್ಣು ಮಕ್ಕಳು, ಮಹಿಳೆಯರ ಮೇಲೆ ಹೆಚ್ಚು ದೌರ್ಜನ್ಯ ನಡೆಯುತ್ತಿದೆ ಸಮಾಜ ತಲೆ ತಗ್ಗಿಸುವ ಹಂತಕ್ಕೆ ಬಂದಿದ್ದು, ಈ ಸಮಯದಲ್ಲಿ ಇವುಗಳ ತಡೆಗೆ ಪ್ರಯತ್ನಿಸಿದಲ್ಲಿ ಇಂತಹ ಮಹಾನ್ ದೇವತೆಗಳ ಹಬ್ಬ ಅಚರಣೆಗೆ ಅರ್ಥ ಉಂಟಾಗಲಿದೆ ಎಂದು ಹೇಳಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್ ಡಿ ನಾಗೇಶ್ ವಹಿಸಿ ಮಾತನಾಡಿ, ನಮ್ಮ ಸಮಾಜದ ವ್ಯವಸ್ಥೆ ಇತ್ತೀಚೆಗೆ ದಾರಿ ತಪ್ಪುತ್ತಿದ್ದು ಎಲ್ಲರು ಕೂಡಿ ಆತ್ಮಾವಲೋಕನ ಮಾಡಿಕೊಳ್ಳಬೇಕು, ಹಾಗಿದ್ದಲ್ಲಿ ಮಾತ್ರ ಸಶಕ್ತ ಸಮಾಜ ನಿರ್ಮಾಣಕ್ಕೆ ಸಾಧ್ಯ ಎಂದು ಹೇಳಿದರು. ಗೌಡಹಳ್ಳಿ ಪ್ರಸನ್ನ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ಸಮಾಜದಲ್ಲಿ ಕೃಷ್ಣನ ಆದರ್ಶಗಳು ಪುರುಷ ಪ್ರಾಯವಾಗಿದ್ದು, ವಿಶ್ವದೆಲ್ಲೆಡೆ ಕೃಷ್ಣ ಧರ್ಮ ಪಸರಿಸಲು ಕಾರಣವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಪಂ ಅಧ್ಯಕ್ಷೆ ಪಾರ್ವತಮ್ಮ, ಸದಸ್ಯ ಕೆ.ವೆಂಕಟೇಶ್, ಪಿಡಬ್ಲೂಡಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹಳಿಮನೆ, ನಿವೃತ್ತ ಶಿಕ್ಷಕ ನಂಜುಂಡ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.