‘ಅಧಿಕಾರಿಗಳು ಬಡವರ ಬಗ್ಗೆ ಕಾಳಜಿ ಹೊಂದಿಲ್ಲ’

Update: 2016-08-25 16:32 GMT

 ಮಡಿಕೇರಿ, ಆ.25: ಗ್ರಾಮೀಣ ಭಾಗದ ಸರಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿ ವಾಸಮಾಡುತ್ತಿರುವ ಕುಟುಂಬಗಳಿಗೆ 94ಸಿ ಅನ್ವಯ ಹಕ್ಕುಪತ್ರ ನೀಡದಿದ್ದರೆ ಕಂದಾಯ ಸಚಿವರಿಗೆ ಪತ್ರ ಬರೆಯುವ ಚಳವಳಿಯನ್ನು ಹಮ್ಮಿಕೊಳ್ಳುವುದಾಗಿ ಮಡಿಕೇರಿ ತಾಪಂ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.

    

 ತಾಪಂ ಸಾಮಾನ್ಯ ಸಭೆ ತೆಕ್ಕಡೆ ಶೋಭಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಗ್ರಾಮೀಣ ಭಾಗದ ಕಡು ಬಡವರು ಸರಕಾರಿ ಜಾಗದಲ್ಲಿ ಮನೆಗಳನ್ನು ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಇಲ್ಲಿಯವರೆಗೆ ಅರ್ಹ ಫಲಾನುಭವಿಗಳಿಗೆ 94ಸಿ ಅನ್ವಯ ಹಕ್ಕುಪತ್ರವನ್ನು ನೀಡಲು ಕ್ರಮ ಕೈಗೊಂಡಿಲ್ಲವೆಂದು ಸದಸ್ಯ ನಾಗೇಶ್ ಕುಂದಲ್ ಪಾಡಿ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿಗಳು ಬಡವರ ಬಗ್ಗೆ ಯಾವುದೇ ಕಾಳಜಿ ಹೊಂದಿಲ್ಲವೆಂದು ಆರೋಪಿಸಿದ ಅವರು ಬಡವರ ಕಷ್ಟವನ್ನು ನಿವಾರಿಸದ ಜಿಲ್ಲಾಡಳಿತ ಬಡವರ ಕಣ್ಮಣಿಯಾಗಿದ್ದ ದೇವರಾಜ ಅರಸು ಅವರ ಜಯಂತಿಯನ್ನು ಆಚರಿಸಿರುವುದು ಯಾವ ಸಾರ್ಥಕತೆಗಾಗಿ ಎಂದು ಪ್ರಶ್ನಿಸಿದರು.

      

    

        ಮುಂದಿನ 15 ದಿನದೊಳಗಾಗಿ ಅರ್ಹ ಬಡವರಿಗೆ ಜಾಗದ ಹಕ್ಕುಪತ್ರ ನೀಡದಿದ್ದಲ್ಲಿ ತಾಲೂಕಿನ ಎಲ್ಲ ಗ್ರಾಮ ಪಂಚಾಯತ್‌ಗಳ ಮೂಲಕ ಕಂದಾಯ ಸಚಿವರಿಗೆ ಪತ್ರ ಬರೆಯುವ ಚಳವಳಿ ನಡೆಸಬೇಕಾಗುತ್ತದೆ ಎಂದು ನಾಗೇಶ್ ಎಚ್ಚರಿಕೆ ನೀಡಿದರು. ಕೊಡಗಿನ ಕುಗ್ರಾಮಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರ ಜಿಲ್ಲೆಯ ಸೆಸ್ಕ್ ಸಿಬ್ಬಂದಿಗ ವಿದ್ಯುತ್ ಕಂಬಗಳನ್ನು ದುರಸ್ತಿ ಮಾಡಲು ಹಿಂದೇಟು ಹಾಕುತ್ತಿದ್ದು, ಲೈನ್ ಮ್ಯಾನ್‌ಗಳ ನೇಮಕಾತಿ ಸಂದರ್ಭ ಸ್ಥಳೀಯರಿಗೆ ಆದ್ಯತೆ ನೀಡಬೇಕೆಂದು ಸ್ಥಾಯಿ ಸಮಿತಿ ಅಧ್ಯಕ್ಷ ರಾಯ್ ತಮ್ಮಯ್ಯ ಒತ್ತಾಯಿಸಿದರು. ಈ ಬಗ್ಗೆ ನಿರ್ಣಯ ಕೈಗೊಂಡು ನಿಗಮಕ್ಕೆ ಕಳುಹಿಸಲು ಸಭೆ ಒಪ್ಪಿಗೆ ಸೂಚಿಸಿತು.

            ನರಿಯಂದಡ ಗ್ರಾಪಂ ವ್ಯಾಪ್ತಿ ಕಿಕ್ಕೇರಿ ಮತ್ತು ಕಿರುಂದಾಡು ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರಿಬ್ಬರು ತಮ್ಮ ತಮ್ಮ ಹುದ್ದೆಗಳನ್ನು ಬದಲಿಸಿಕೊಂಡಿದ್ದು, ಕಿಕ್ಕೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಯಕರ್ತೆ ಕರ್ತವ್ಯ ಲೋಪ ಎಸಗುತ್ತಿದ್ದಾರೆ ಎಂದು ಸದಸ್ಯೆ ಉಮಾ ಪ್ರಭು ಆರೋಪಿಸಿದರು.

   ಈ ಬಗ್ಗೆ ವ್ಯಾಪಕ ಚರ್ಚೆ ನಡೆದು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಅಧ್ಯಕ್ಷೆ ಶೋಭಾ ಹೇಳಿದರು.

   

        ಪೆರೂರು, ಗಾಳಿಬೀಡು ಸೇರಿದಂತೆ ಮಡಿಕೇರಿ ತಾಲೂಕಿನ ಕೆಲವು ಶಾಲೆಗಳ ದುಃಸ್ಥಿತಿಯ ಬಗ್ಗೆ ಸದಸ್ಯರು ದೂರು ಹೇಳಿದಾಗ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಉಪಸ್ಥಿತಿಯಲ್ಲಿ ಶಾಲೆಗಳನ್ನು ಪರಿಶೀಲಿಸಿ ಹಂತ ಹಂತವಾಗಿ ಅಭಿವೃದ್ಧಿ ಪಡಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಇದೇ ಸಂದರ್ಭ ಮೀನುಗಾರಿಕೆ ಇಲಾಖೆ ವತಿಯಿಂದ ಮಂಜೂರಾಗಿದ್ದ ಮೀನುಗಾರಿಕಾ ಪರಿಕರಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಯಿತು.

ಸಭೆಯಲ್ಲಿ ತಾಪಂ ಉಪಾಧ್ಯಕ್ಷ ಸಂತು ಸುಬ್ರಮಣಿ, ಸದಸ್ಯರು ಹಾಗೂ ಕಾರ್ಯ ನಿರ್ವಾಹಕ ಅಧಿಕಾರಿ ಟಿ.ಎನ್.ಜೀವನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News