ಸರಳ ಜೀವನದಿಂದ ಒತ್ತಡ ನಿವಾರಣೆ ಸಾಧ್ಯ: ಪ್ರಭಾವತಿ ಎಂ.ಹಿರೇಮಠ್
ಚಿಕ್ಕಮಗಳೂರು, ಆ.26: ಸಹಜ ಮತ್ತು ಸರಳ ಜೀವನದಿಂದ ಒತ್ತಡ ಮುಕ್ತ ಜೀವನ ಸಾಗಿಸಲು ಸಾಧ್ಯ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಪ್ರಾಧಿಕಾರದ ಅಧ್ಯಕ್ಷೆ ಪ್ರಭಾವತಿ ಎಂ.ಹಿರೇಮಠ್ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಕೀಲರ ಸಂಘ ಹಾಗೂ ವಾರ್ತಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ಮಾನಸಿಕ ಆರೋಗ್ಯ ಕುರಿತ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾರ್ಥತೆ, ಅಸೂಯೆ ಭಾವನೆಗಳೆ ಮನುಷ್ಯನ ಒತ್ತಡ ಹೆಚ್ಚಾಗಲು ಮುಖ್ಯ ಕಾರಣವಾಗಿವೆ. ನಮ್ಮ ಪೂರ್ವಜರು ಒತ್ತಡ ರಹಿತವಾಗಿ ಜೀವನ ಸಾಗಿಸುತ್ತಿದ್ದರು. ಆದರೆ, ಮನುಷ್ಯನ ಆಸೆ ಮತ್ತು ಕೆಲಸ ಮಿತಿಯಾಗಿದ್ದರೆ ಒತ್ತಡ ಕಡಿಮೆ ಮಾಡಿಕೊಳ್ಳಬಹುದು, ಆಗುವುದೆಲ್ಲಾ ಒಳ್ಳೆಯದಕ್ಕೆ ಎಂದು ತಿಳಿದುಕೊಳ್ಳಬೇಕು. ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಹೇಗೆ ಇರುತ್ತದೆಯೋ ಹಾಗೆಯೆ ಆತನನ್ನು ಒಪ್ಪಿಕೊಳ್ಳಬೇಕು, ಇಲ್ಲಾ ಎಂಬುದನ್ನು ಹುಡುಕಬಾರದು, ತಿಳುವಳಿಕೆಯಿಂದ ಸರಿ ಎನಿಸಿದ್ದನ್ನು ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಜಿಲ್ಲಾ ಮಾನಸಿಕ ರೋಗ ತಜ್ಞರಾ ಡಾ. ವಿನಯಕುಮಾರ್ ಕೆ.ಎಸ್ ಮಾತನಾಡಿ, ಧ್ಯಾನ ಮತ್ತು ಆಪ್ತಸಮಾಲೋಚನೆಯಿಂದ ಶೇ .100 ರಷ್ಟು ಮಾನಸಿಕ ರೋಗಗಳನ್ನು ಗುಣಪಡಿಸಲು ಸಾಧ್ಯ ಎಂದರು.
ಮನುಷ್ಯನಿಗೆ ಒತ್ತಡ ಹೆಚ್ಚಾದಂತೆ ರೋಗಗಳು ಹೆಚ್ಚಾಗುತ್ತದೆ. ಒಬ್ಬ ವ್ಯಕ್ತಿ ಸಂಪೂರ್ಣ ಮಾನಸಿಕ ಆರೋಗ್ಯ ಹೊಂದಿದ್ದಾನೆ ಎಂದರೆ ಆತ ರಾತ್ರಿ ಸಮಯದಲ್ಲಿ ಕನಸು ರಹಿತ ಆಳವಾಗಿ ನಿದ್ರಿಸುತ್ತಾನೆ, ನಮ್ಮ ಮನಸ್ಸು ಪಂಚೇಂದ್ರಿಯಗಳ ಮೂಲಕ ಗ್ರಹಿಸುತ್ತದೆ. ನಾವು ಭಯಬಿದ್ದಾಗ ನಮ್ಮ ಹೃದಯ ಬಡಿತ ಏರಿಕೆಯಾಗುತ್ತದೆ ಕೆಲವರಿಗೆ ಗಂಟಲು ಒಣಗುತ್ತದೆ, ಸಾಯುವ ಭಯವಾಗುತ್ತದೆ ಇವೆಲ್ಲವೂ ಮಾನಸಿಕ ರೋಗಗಳೇ ಆಗಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಬಿ.ನಂದಕುಮಾರ್, 2ನೆ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ಡಿ.ಕಂಬೇಗೌಡ, ವಕೀಲರ ಸಂಘದ ಅಧ್ಯಕ್ಷ ಎಚ್.ಎಚ್. ಕೃಷ್ಣಮೂರ್ತಿ, ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಯಾನಂದ್ ವಿ.ಎಚ್, ಮತ್ತಿತರರು ಉಪಸ್ಥಿತರಿದ್ದರು.