×
Ad

ನಗರಸಭೆ ಸದಸ್ಯರು, ಅಧಿಕಾರಿಗಳಿಗೆ ಡಿಸಿಯಿಂದ ತರಾಟೆ

Update: 2016-08-26 22:21 IST

ಕಾರವಾರ, ಆ.26: ನಗರದ ಕಾಜುಭಾಗದ ಶೇಕ್ ಕಾಂಪ್ಲೆಕ್ಸ್‌ನ ಶೌಚದ ಕೊಳಚೆ ನೀರು ರಸ್ತೆಗೆ ಹರಿದು ಬರುತ್ತಿದ್ದು, ಈ ಬಗ್ಗೆ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರ ಬಳಿ ತೆರಳಿದ್ದ ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ತರಾಟೆಗೆ ತೆಗೆದುಕೊಂಡರು.

ಗುರುವಾರ ನಗರಸಭೆಯ ಸಾಮಾನ್ಯ ಸಭೆ ಸಂದರ್ಭ ಸಾರ್ವಜನಿಕರು ನಗರಸಭೆಗೆ ತೆರಳಿ ಕ್ರಮಗೊಳ್ಳುವಂತೆ ಪ್ರತಿಭಟಿಸಿದ್ದರು. ಈ ಸಂದರ್ಭ ಸದಸ್ಯರ ಒಪ್ಪಿಗೆಯಂತೆ ಅಧಿಕಾರಿಗಳು ಜೆಸಿಬಿಯನ್ನು ಸ್ಥಳಕ್ಕೆ ಕಳುಹಿಸಿ ಮಣ್ಣು ತುಂಬಲು ಮುಂದಾಗಿದ್ದರು. ಜಿಲ್ಲಾಧಿಕಾರಿ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಗೊಂಡಿತ್ತು.

ಅದೇ ವಿಷಯಕ್ಕೆ ಸಂಬಂಧಿಸಿದಂತೆ ಸದಸ್ಯರು, ಅಧಿಕಾರಿಗಳು ಸೇರಿ ಶೇಕ್ ಕಾಂಪ್ಲೆಕ್ಸ್‌ನ ನೀಲನಕ್ಷೆಯನ್ನು ಜಿಲ್ಲಾಧಿಕಾರಿಗೆ ತೋರಿಸಿ, ನಕ್ಷೆಯಂತೆ ಶೌಚದ ಟ್ಯಾಂಕ್ ಹಾಕಿರಲ್ಲಿಲ್ಲ ಎನ್ನುವ ವಿಷಯವನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದರು. ಅದಕ್ಕೆ ಜಿಲ್ಲಾಧಿಕಾರಿ ಪರಿಶೀಲನೆ ಪೂರ್ವದಲ್ಲಿ ಶೌಚಾಲಯದ ಟ್ಯಾಂಕ್ ಒಡೆದಿದ್ದು ನಗರಸಭೆಯ ತಪ್ಪಿದೆ. ಒಡೆಯಲು ಹೇಳಿದವರು ಯಾರು? ಎಂದು ಪ್ರಶ್ನಿಸಿದರು. ಹಿಂದೆ ಗಟಾರವನ್ನು ಒಡೆದಿದ್ದು ನಗರಸಭೆ. ಈಗ ಮಣ್ಣು ತುಂಬಲು ಜೆಸಿಬಿ ಕಳುಹಿಸಲು ಹೇಳಿದ್ದು ಯಾರು. ಈ ವಿಷಯದಲ್ಲಿ ನಗರಸಭೆ ಸದಸ್ಯರಿಗೇನು ಅಧಿಕಾರವಿದೆ ಎಂದು ಜಿಲ್ಲಾಧಿಕಾರಿ ಆಕ್ರೋಶಗೊಂಡರು. ಈ ಬಗ್ಗೆ ಕ್ರಮಕೈಗೊಳ್ಳುವಂತೆ ನಗರಸಭೆಗೆ ಸುಮಾರು 200 ಜನ ಬಂದು ಪ್ರತಿಭಟಿಸಿದ್ದರು ಎಂದು ಸದಸ್ಯರು ಜಿಲ್ಲಾಧಿಕಾರಿ ಗಮನಕ್ಕೆ ತಂದಾಗ, ನಾವು ಸಾವಿರ ಜನರನ್ನು ಕಳುಹಿಸುತ್ತೇವೆ ಆಗೇನು ಮಾಡುತ್ತೀರಾ ಎಂದು ಜಿಲ್ಲಾಧಿಕಾರಿ ಮರು ಪ್ರಶ್ನಿಸಿದರು. ಇದರಿಂದ ಸದಸ್ಯರು, ಅಧಿಕಾರಿಗಳು ಸುಮ್ಮನಾದರು. ಮೊದಲು ನಿಮ್ಮ ಮನೆಯ ನೀಲನಕ್ಷೆ, ಪರವಾನಿಗೆ ಸರಿಯಾಗಿದೆಯೆ ಎಂದು ಪರೀಕ್ಷಿಸಿಕೊಳ್ಳಿ. ಈ ವರೆಗೆ ಎಷ್ಟು ಬಹುಮಹಡಿ ಕಟ್ಟಡಗಳಿಗೆ ಪರವಾನಿಗೆ ನೀಡಿದ್ದೀರಿ, ನಗರ ವ್ಯಾಪ್ತಿಯಲ್ಲಿ ಎಷ್ಟು ಬಹುಮಹಡಿ ಕಟ್ಟಡ ಅನಧಿಕೃತವಾಗಿದೆ ಎನ್ನುವ ಮಾಹಿತಿ ತಮ್ಮ ಬಳಿ ಇದೆ. ಈ ಬಗ್ಗೆ ಎಷ್ಟು ಕ್ರಮಕೈಗೊಂಡಿದ್ದೀರಿ ಎಂದು ಜಿಲ್ಲಾಧಿಕಾರಿ ಕಿಡಿಕಾರಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News