ಬಸವನಹಳ್ಳಿ : ವಸತಿ ಶಾಲೆಯಲ್ಲಿ ಪ್ರತಿಭಾ ಕಾರಂಜಿ

Update: 2016-08-26 16:59 GMT

 ಕುಶಾಲನಗರ, ಆ.26: ಸಮೀಪದ ಬಸವನ ಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವಶಿಕ್ಷಣ ಅಭಿಯಾನ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಸವನಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಪ್ರತಿಭಾ ಕಾರಂಜಿ ಹಾಗೂ ಕಲಿಕೋತ್ಸವ 2016-17 ಕಾರ್ಯ ಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕೊಡಗು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಮಾಯಾದೇವಿ ಗಲಗಲಿ ನೆರವೇರಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅನೇಕ ಪ್ರತಿಭೆಗಳು ಅಡಗಿಕೊಂಡಿರುತ್ತವೆ. ಆದರೆ ಕೆಲವರಿಗೆ ತಮ್ಮ ಪ್ರತಿಭೆಗಳನ್ನು ತೋರಿಸಿಕೊಳ್ಳಲು ಸೂಕ್ತ ವೇದಿಕೆ ದೊರೆತಿರುವುದಿಲ್ಲ. ಸರಕಾರ ಹಾಕಿಕೊಂಡಿರುವ ಇಂತಹ ಪ್ರತಿಭಾಕಾರಂಜಿ ಮಕ್ಕಳ ಪ್ರತಿಭೆಗಳಿಗೆ ಕನ್ನಡಿ ಹಿಡಿದಂತೆ ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಪಂ ಸದಸ್ಯ ಲತೀಫ್ ಮಾತನಾಡಿ, ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತೆಗೆಯಲು ಪ್ರತಿಭಾಕಾರಂಜಿ ಸಹಕಾರಿಯಾಗಲಿದೆ ಎಂದ ಅವರು, ಅತಿಹೆಚ್ಚು ಪ್ರಶಸ್ತಿಗಳನ್ನು ಪಡೆಯುವ ಶಾಲೆಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ನಗದು ಬಹುಮಾನವನ್ನು ವೈಯಕ್ತಿಕವಾಗಿ ಕೊಡುವುದಾಗಿ ಘೋಷಿಸಿದರು. ಈ ವೇಳೆ ಕಾರ್ಯಕ್ರಮಕ್ಕೆ ಗುಡ್ಡೆಹೊಸೂರು ಗ್ರಾಪಂ ಅಧ್ಯಕ್ಷೆ ಭಾರತಿ, ಜಿಪಂ ಸದಸ್ಯೆ ಸುನಿತಾ, ತಾಪಂ ಸದಸ್ಯೆ ಪುಷ್ಪಾ ಜನಾರ್ದನ್, ಸುಹಾದ್ ಅಶ್ರಫ್, ಸತ್ಯನಾರಾಯಣ ಮತ್ತಿತರರು ಪಾಲ್ಗೊಂಡಿದ್ದರು. ಮೊರಾರ್ಜಿ ಶಾಲೆಯ ಪ್ರಾಂಶುಪಾಲ ಚಂದ್ರಶೇಖರ ರೆಡ್ಡಿ ಸ್ವಾಗತಿಸಿದರು. ರಮೇಶ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News