ವೆದ್ಯಾಧಿಕಾರಿ ನೇಮಿಸಲು ಆಗ್ರಹ: ಡಿಸಿಗೆ ಮನವಿ
ಕಾರವಾರ, ಆ.26: ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುವ ಪ್ರವಾಸಿತಾಣವಾದ ಗೋಕರ್ಣದಲ್ಲಿ ಸರಕಾರಿ ಆಸ್ಪತ್ರೆ ಇದ್ದರೂ ವೈದ್ಯಾಧಿಕಾರಿ ಇಲ್ಲದಂತಾಗಿದೆ. ಕೂಡಲೇ ವೈದ್ಯಾಧಿಕಾರಿಗಳನ್ನು ನೇಮಿಸಲು ಕ್ರಮ ಕೈಗೊಳ್ಳಬೇಕು ಎಂದು ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಗೋಕರ್ಣ ಪ್ರಮುಖವಾಗಿದೆ. ಇದು ಐತಿಹಾಸಿಕ ಹಿನ್ನೆಲೆಯುಳ್ಳ ಕ್ಷೇತ್ರವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೋಕರ್ಣದ ಭಕ್ತರಿದ್ದು ಅವರೆಲ್ಲರೂ ಇಲ್ಲಿ ಭೇಟಿ ನೀಡುತ್ತಾರೆ. ಹೊರ ಪ್ರದೇಶದ ಜನರಿಗೆ ಅನಾರೋಗ್ಯ ಉಂಟಾದಾಗ ಸೂಕ್ತ ಚಿಕಿತ್ಸೆ ದೊರೆಯದ ಕಾರಣ ಪರದಾಡುತ್ತಲಿದ್ದು, ಇದರಿಂದ ಆಡಳಿತ ವೈಖರಿಯ ಹೆಸರು ಹಾಳಾಗುತ್ತಿದೆ ಎಂದು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ. ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಬ್ಬರೇ ವೈದ್ಯರಿದ್ದು, ಅವರಿಂದ ರೋಗಿಗಳನ್ನು ಸಂಬಾಳಿಸಲು ಸಾಧ್ಯವಾಗುತ್ತಿಲ್ಲ. ಸ್ಥಳೀಯವಾಗಿ ಬದುಕುತ್ತಿರುವವರು ಕೂಡ ಬಡ ಹಾಗೂ ಕೃಷಿ ಕುಟುಂಬದವರಾಗಿದ್ದಾರೆ. ಅಲ್ಲಿನವರಿಗೆ ಆರೋಗ್ಯ ಸಮಸ್ಯೆ ಎದುರಾದಾಗ ಸ್ಥಳೀಯ ಆಸ್ಪತ್ರೆಯಿಲ್ಲದ ಕಾರಣ ದೂರದ ಊರುಗಳಿಗೆ ರೋಗಿಗಳನ್ನು ಕೊಂಡೊಯ್ಯಬೇಕಾಗಿದೆ ಎಂದು ತಿಳಿಸಿದರು.
ಗೋಕರ್ಣದಲ್ಲಿ ಸೂಕ್ತ ವೈದ್ಯಾಧಿಕಾರಿಗಳಿಲ್ಲದ ಕಾರಣ ಹಲವು ಸಾವು ನೋವುಗಳು ಸಂಭವಿಸಿವೆ. ಈಚೆಗೆ ಹಾವು ಕಡಿತದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಲು ಸುಸಜ್ಜಿತ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಮಾತನಾಡಿ, ಎಂಬಿಬಿಎಸ್ ಓದಿದ ವೈದ್ಯರು ಮುಂದೆ ಬಂದಲ್ಲಿ ತಕ್ಷಣ ನೇಮಕಾತಿ ನಡೆಸಲಾಗುವುದು ಎಂಬ ಭರವಸೆ ನೀಡಿದರು. ಸಂಘಟನೆ ಅಧ್ಯಕ್ಷ ದಿಲೀಪ್ ಅರ್ಗೇಕರ್, ಪದಾಧಿಕಾರಿಗಳಾದ ದಿವ್ಯಾ ದೇವಿದಾಸ್ ನಾಯ್ಕ, ಸುಭಾಶ್ ಗುನಗಿ, ಸತೀಶ್ ಅರ್ಗೇಕರ್, ರೋಷನ್ ತಾಂಡೇಲ್, ಸೈಯದ್ ಅಶ್ರಫ್, ಸಮೀರ್ ಶೇಜವಾಡಕರ್ ಮತ್ತಿತರರಿದ್ದರು.