ಜೆಸಿಬಿ ತಡೆದು ಪ್ರತಿಭಟನೆ: ಡಿಸಿ ಮಧ್ಯ ಪ್ರವೇಶ
ಕಾರವಾರ, ಆ.26: ಜನರ ಪ್ರತಿಭಟನೆಗೆ ಮಣಿದು ಕಾಜುಭಾಗದ ಶೇಕ್ ಕಾಂಪ್ಲೆಕ್ಸ್‌ನ ಶೌಚದ ನೀರು ರಸ್ತೆಗೆ ಬಾರದಂತೆ ಮಣ್ಣು ತುಂಬಲು ಮುಂದಾದ ಜೆಸಿಬಿಯನ್ನು ಕಾಂಪ್ಲೆಕ್ಸ್‌ನ ಮಾಲಕರು ತಡೆದು ಪ್ರತಿಭಟಿಸಲು ಮುಂದಾದರು. ಜೆಸಿಬಿಯ ಮುಂದೆ ನಿಂತು ಮಣ್ಣು ತುಂಬಲು ಬಿಡುವುದಿಲ್ಲ ಎಂದು ಆಕ್ರೋಶಗೊಂಡು ಜೆಸಿಬಿ ಚಾಲಕನಿಗೆ ಹೊಡೆಯಲು ಮುಂದಾದ ಘಟನೆ ನಡೆದಿದೆ. ಶೌಚದ ನೀರಿನ ತುಂಬುವ ಸ್ಥಳದಲ್ಲಿ ಮಣ್ಣು ತುಂಬುವ ಕಾರ್ಯಾಚರಣೆ ನಡೆಸಲು ಬಿಡುತ್ತಿಲ್ಲ ಎನ್ನುವ ಕಾರಣಕ್ಕೆ ಆಕ್ರೋಶಗೊಂಡ ಜನರ ವಿರೋಧ ಹೆಚ್ಚಾಗುತ್ತಿದ್ದಂತೆ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಮಧ್ಯ ಪ್ರವೇಶಿಸಿ ಜೆಸಿಬಿ ಚಾಲಕನಿಗೆ ಯಾರ ಆದೇಶ ಪಡೆದು ಬಂದಿರುವುದಾಗಿ ತರಾಟೆಗೆ ತೆಗೆದುಕೊಂಡರು. ಬಹುಮಹಡಿ ಕಟ್ಟಡದ ಶೌಚದ ಕೊಳಚೆ ನೀರು ರಸ್ತೆಗೆ ಬರುತ್ತಿದೆ. ಇದರಿಂದಾಗಿ ರಸ್ತೆ ಮೇಲೆ ಸಂಚಾರ ಸಾಧ್ಯವಾಗುತ್ತಿಲ್ಲ ಎಂದು ಜನರು ಜಿಲ್ಲಾಧಿಕಾರಿ ಗಮನಕ್ಕೆ ತಂದರು. ಜಿಲ್ಲಾಧಿಕಾರಿ ಈ ಬಗ್ಗೆ ಪರಿಶೀಲನೆ ನಡೆಸಿ, ಕೊಳಚೆ ನೀರು ರಸ್ತೆಗೆ ಬಾರದೆ ಗಟಾರಕ್ಕೆ ಸೇರುವ ಕ್ರಮ ಕೈಗೊಳ್ಳವುದಾಗಿ ಜನರಿಗೆ ತಿಳಿಸಿದರು.
ಸ್ಥಳದಲ್ಲಿದ್ದ ನಗರಾಭಿವೃದ್ಧಿಕೋಶ ಅಧಿಕಾರಿ ಆರ್.ಪಿ. ನಾಯ್ಕ ಶೌಚದ ಕೊಳಚೆ ನೀರು ರಸ್ತೆಗೆ ಬರದಂತೆ ಗಟಾರವನ್ನು ಎತ್ತರಗೊಳಿಸುವುದಾಗಿ ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು. ಇಂಥ ಸಮಸ್ಯೆ ಮುಂದುವರಿಯದಂತೆ ಜಿಲ್ಲಾಧಿಕಾರಿ ಕಾಂಪ್ಲೆಕ್ಸ್ ಮಾಲಕರಿಗೆ ಸೂಚಿಸಿದರು.