×
Ad

ರಾಷ್ಟ್ರದ ಬೆಳವಣಿಗೆಯಲ್ಲಿ ಯುವಸಮೂಹದ ಪಾತ್ರ ಮುಖ್ಯ: ಪಿಎಸ್ಸೈ ಮಂಜುನಾಥ ಅರ್ಜುನ್ ಲಿಂಗಾರೆಡ್ಡಿ

Update: 2016-08-26 22:36 IST

ಸೊರಬ, ಆ.26: ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪೋಷಕರು ಪಡುವ ಶ್ರಮಕ್ಕೆ ಬೆಲೆ ಕಟ್ಟಲಾಗದು. ತಂದೆ-ತಾಯಿಗಳು ಹಾಕಿದ ಶ್ರಮ ಹಾಗೂ ಅವರು ಇಟ್ಟಿರುವ ನಿರೀಕ್ಷೆಯನ್ನು ಈಡೇರಿಸುವಲ್ಲಿ ವಿದ್ಯಾರ್ಥಿಗಳು ಮುಂದಾಗಬೇಕೆಂದು ಪಿಎಸ್ಸೈ ಮಂಜುನಾಥ ಅರ್ಜುನ್ ಲಿಂಗಾರೆಡ್ಡಿ ಕರೆ ನೀಡಿದರು.

 ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

 ಇಂದಿನ ಯುವಜನತೆ ತಮ್ಮ ಜವಾಬ್ದಾರಿಗಳನ್ನು ಅರಿಯಬೇಕಿದೆ. ಮಕ್ಕಳ ಭವಿಷ್ಯವನ್ನು ರೂಪಿಸಲು ತಂದೆ-ತಾಯಿಗಳು ಹಾಕಿದ ಶ್ರಮಕ್ಕೆ ಬೆಲೆಕಟ್ಟಲಾಗದು. ರಾಷ್ಟ್ರದ ಸರ್ವತೋಮುಖ ಬೆಳವಣಿಗೆಯಲ್ಲಿ ಯುವಜನತೆಯ ಪಾತ್ರ ಮುಖ್ಯವಾಗಬೇಕು. ಕೌಟುಂಬಿಕ ಅಭಿಮಾನದ ಜೊತೆಗೆ ರಾಷ್ಟ್ರಾಭಿಮಾನವನ್ನು ಹೊಂದಬೇಕು. ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡರೆ ಸಾಲದು, ಸಾಧಿಸುವ ಛಲ ಹೊಂದಿರಬೇಕು ಎಂದರು.

  ವಿದ್ಯಾರ್ಥಿಗಳು ಕಷ್ಟಪಟ್ಟು ವಿದ್ಯೆ ಕಲಿಯಬೇಕು. ಕಷ್ಟದ ಅರಿವಿದ್ದಾಗ ಮಾತ್ರ ಗುರಿ ತಲುಪಲು ಸಹಾಯಕವಾಗುತ್ತದೆ. ಶಾಲಾ-ಕಾಲೇೆಜುಗಳಿಗೆ ವಿದ್ಯಾರ್ಥಿಗಳು ಮೋಟಾರ್ ಬೈಕ್‌ಗಳನ್ನು ತರುವುದು ಅನವಶ್ಯಕವಾಗಿದೆ. ಸೂಕ್ತ ದಾಖಲೆಗಳಿಲ್ಲದ ವಾಹನ ಚಾಲನೆ ಕಾನೂನು ಬಾಹಿರವಾಗಿದೆ. ಕಲಿಕೆಯ ಉದ್ದೇಶವನ್ನಿಟ್ಟುಕೊಂಡು ಕಾಲೇಜುಗಳಿಗೆ ಬರಬೇಕೆ ವಿನಃ, ಕಲಿಕೆಯಲ್ಲಿ ತೊಡಗಿದವರಿಗೆ ತೊಂದರೆ ಕೊಡುವುದಕ್ಕಲ್ಲ ಎಂಬುದನ್ನು ತಿಳಿಯಬೇಕು ಎಂದರು.

ಪ್ರಥಮ ಪದವಿಯ ವಿದ್ಯಾರ್ಥಿಗಳನ್ನು ಹಾಗೂ ಅತಿಥಿಗಳನ್ನು ಹಿರಿಯ ವಿದ್ಯಾರ್ಥಿಗಳು ಡೊಳ್ಳು ಮೆರವಣಿಗೆಯೊಂದಿಗೆ ಕರೆತಂದರು. ಪ್ರಾಂಶುಪಾಲ ಮುಹಮ್ಮದ್ ಅಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಉಪನ್ಯಾಸಕರಾದ ಡಾ. ಶ್ಯಾಮಸುಂದರ್, ಎಂ.ಎಚ್.ರಾಜಪ್ಪ, ರವೀಂದ್ರ ಭಟ್, ಸೀಮಾ ಕೌಸರ್, ಟಿ.ರಾಘವೇಂದ್ರ, ಎಸ್.ಎಂ ನೀಲೇಶ. ನಾಗರಾಜ್, ವಸಂತ ಕುಮಾರ್, ರುದ್ರಪ್ಪ ಅಕ್ಕಿ, ತೇಜಪ್ಪ, ಶಿವಕುಮಾರ್, ಅನಿಲ್ ಕುಮಾರ್, ಶಂಕರ್, ಪೂರ್ಣಿಮಾ, ಪ್ರವೀಣ್, ಸಿದ್ದಪ್ಪ, ವಿಘ್ಞೇಶ್, ಝಹೀರುದ್ದೀನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News