ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣ: 8 ಆರೋಪಿಗಳ ಬಂಧನ
ಮಡಿಕೇರಿ ಆ.26 : ಕುಶಾಲನಗರದಲ್ಲಿ ಆ.14 ರಂದು ನಡೆದ ಆಟೊ ಚಾಲಕ ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು ಪೊಲೀಸರು 8 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಐಜಿ ಸಿಂಗ್ ಅವರು, ಹತ್ಯೆ ಪ್ರಕರಣ ಮತ್ತು ಆರೋಪಿಗಳ ಬಂಧನದ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಿದರು.
ಮಡಿಕೇರಿ ನಗರದ ನಿವಾಸಿ, ಪಿಎಫ್‌ಐ ಕಾರ್ಯಕರ್ತ ಎಂ.ಎಚ್. ತುಫೈಲ್, ಹುಣಸೂರು ಮೂಲದ ಮಡಿಕೇರಿಯ ರಾಣಿಪೇಟೆ ನಿವಾಸಿ ನಯಾಝ್, ಉಪ್ಪಿನಂಗಡಿ ಮೂಲದ ಮಡಿಕೇರಿಯ ಕೂರ್ಗ್ ಸ್ಪೈಸಸ್ ಹಿಂಭಾಗದ ನಿವಾಸಿ ಮುಹಮ್ಮದ್ ಮುಸ್ತಫ, ಗೊಂದಿ ಬಸವಹಳ್ಳಿ ನಿವಾಸಿ ಇಲಿಯಾಸ್, ಹುಣಸೂರು ನಿವಾಸಿ ಇರ್ಫಾನ್ ಅಹ್ಮ್ಮದ್, ಸೋಮವಾರಪೇಟೆ ತಣ್ಣೀರು ಹಳ್ಳದ ಹಾಲಿ ಗೊಂದಿಬಸವನಹಳ್ಳಿ ನಿವಾಸಿ, ಪಿಎಫ್‌ಐನ ಜಿಲ್ಲಾ ಕಾರ್ಯದರ್ಶಿ ಟಿ.ಎ.ಹ್ಯಾರಿಸ್, ಮಾದಾಪಟ್ಟಣದ ಮುಜೀಬುರ್ರಹ್ಮಾನ್, ಗೊಂದಿ ಬಸವನಹಳ್ಳಿಯ ಶರೀಫ್ ಬಂಧಿತ ಆರೋಪಿಗಳಾಗಿದ್ದಾರೆ. ಮತ್ತೊಬ್ಬ ಆರೋಪಿ ಮಡಿಕೆೇರಿ ನಗರದ ನಿವಾಸಿ ಮುಹಮ್ಮದ್ ಅಫ್ರೀನ್ ತಲೆ ಮರೆಸಿಕೊಂಡಿದ್ದಾನೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್, ಆಲ್ಟೊ ಕಾರ್, 2 ಚಾಕುಗಳು ಮತ್ತು 10 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಐವರು ಪೊಲೀಸ್ ಕಸ್ಟಡಿಗೆ ಮೊದಲ ಐವರು ಆರೋಪಿಗಳಾದ ಎಂ.ಎಚ್.ತುಫೈಲ್, ನಯಾಝ್, ಮುಹಮ್ಮದ್ ಮುಸ್ತಫ, ಇಲಿಯಾಸ್ ಹಾಗೂ ಇರ್ಫಾನ್ ಅಹ್ಮದ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದ್ದು, ಉಳಿದವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ತಲೆ ಮರೆಸಿಕೊಂಡಿರುವ ಅಫ್ರೀನ್ ಪತ್ತೆಗೆ ತನಿಖೆೆ ಚುರುಕುಗೊಂಡಿದೆಯೆಂದು ಬಿ.ಕೆ.ಸಿಂಗ್ ತಿಳಿಸಿದರು. ಆರೋಪಿಗಳನ್ನು ಬಂಧಿಸಿದ ತಂಡಕ್ಕೆ ರೂ.1 ಲಕ್ಷ ಬಹುಮಾನ
ಪ್ರಕರಣವನ್ನು ಕೆೇವಲ 10 ದಿನಗಳಲ್ಲಿ ಭೇದಿಸಿದ ಪೊಲೀಸರ ಪರಿಶ್ರಮವನ್ನು ಶ್ಲಾಘಿಸಿದ ಐಜಿ ಸಿಂಗ್, ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರು, ಕಾರ್ಯಾಚರಣೆೆಯ ತಂಡಕ್ಕೆ 1 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ ಎಂದು ತಿಳಿಸಿದರು. ಸಿಂಗ್ ಅವರು ಕೂಡ ಪೊಲೀಸರಿಗೆ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸಿದರು. ಪ್ಲಾಸ್ಟಿಕ್ ಫ್ಲೆಕ್ಸ್‌ಗಳಿಗೆ ಅವಕಾಶವಿಲ್ಲ
ಗಣೇಶ ಚತುರ್ಥಿ ಸಮೀಪಿಸುತ್ತಿರುವುದರಿಂದ ಯಾರಿಗೂ ಪ್ಲಾಸ್ಟಿಕ್ ಫ್ಲೆಕ್ಸ್ ಅಳವಡಿಸಲು ಅವಕಾಶವಿಲ್ಲವೆಂದು ಬಿ.ಕೆ.ಸಿಂಗ್ ತಿಳಿಸಿದರು. ಬಟ್ಟೆ ಬ್ಯಾನರ್‌ಗಳಿಗೆ ಮಾತ್ರ ಅವಕಾಶವಿದ್ದು, ಇವುಗಳನ್ನು ಅಳವಡಿಸುವುದಕ್ಕೂ ಪೊಲೀಸ್ ಇಲಾಖೆಯ ಅನುಮತಿಯ ಅಗತ್ಯವಿದೆ. ಅನುಮತಿ ಪಡೆಯದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.