ಧಾರ್ಮಿಕ ಅಸಹನೆಯಿಂದ ಕಲಬುರ್ಗಿ ಹತ್ಯೆ: ಮರುಳಸಿದ್ದಪ್ಪ
ಬೆಂಗಳೂರು, ಆ.26: ದೇಶದಲ್ಲಿ ವಿಷಮ ವಾತಾವರಣ ವನ್ನು ಬಿತ್ತುತ್ತಿರುವ ಧಾರ್ಮಿಕ ಅಸಹನೆಯನ್ನು ರಾಜಕೀಯ ಮತ್ತು ಸಾಮಾಜಿಕ ಪರಿಸರದಿಂದ ಹೊರಹಾಕುವ ಅನಿವಾರ್ಯವಿದೆ ಎಂದು ಹಿರಿಯ ಚಿಂತಕ ಪ್ರೊ.ಕೆ.ಮರುಳಸಿದ್ದಪ್ಪ ತಿಳಿಸಿದ್ದಾರೆ. ಶುಕ್ರವಾರ ನಗರದ ಕಸಾಪದಲ್ಲಿ ವಿವಿಧ ಜನಪರ ಸಂಘಟನೆಗಳು ಆಯೋಜಿಸಿದ್ದ ಹಿರಿಯ ಸಂಶೋಧಕ ‘ಎಂ.ಎಂ.ಕಲಬುರ್ಗಿ ಒಂದು ನೆನಪು’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದಲ್ಲಿ ಪರೋಹಿತಶಾಹಿ ವರ್ಗದ ವಿರುದ್ಧ ಅಭಿ ಪ್ರಾಯ ಮತ್ತು ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುವ ಮುನ್ನ, ಮುಂದಾಗುವ ಹಲ್ಲೆ ಮತ್ತು ದೌರ್ಜನ್ಯಗಳಿಗೂ ಸಿದ್ದರಾಗಲೇಬೇಕು. ಚಿಂತಕರಾದ ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ, ಡಾ.ಎಂ.ಎಂ.ಕಲಬುರ್ಗಿಯವರ ಹತ್ಯಗಳ ಹಿಂದೆ ಧಾರ್ಮಿಕ ಅಸಹನೆಯಿದೆ ಎಂದರು.
ಎಂ.ಎಂ.ಕಲಬುರ್ಗಿಯವರ ಅಭಿಪ್ರಾಯಗಳು ನಿಷ್ಠುರಕ್ಕೆ ಗುರಿಯಾಗಿದ್ದವು. ಈ ಪರಿಣಾಮ ಹಲವು ಬಾರಿ ಅವರ ಮೇಲೆ ಹಲ್ಲೆ ನಡೆದಿದ್ದವು. ಇದೇ ಕಾರಣಕ್ಕೆ ಕೋಮು ವಾದಿಗಳ ಗುಂಡೇಟಿಗೆ ಬಲಿಯಾದರು. ದೇಶದಲ್ಲಿ ಎರಡು ವರ್ಷಗಳಲ್ಲಿ ಸಂಭವಿಸಿರುವ ಅಭಿವ್ಯಕ್ತಿ ಸ್ವಾತಂತ್ರದ ಮೇಲಿನ ಹಲ್ಲೆಗಳು ಸಹಿಸುವಂತಹದ್ದಲ್ಲ ಎಂದರು.
ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಮಾತನಾಡಿ, ಎಂ.ಎಂ.ಕಲಬುರ್ಗಿಯವರ ಕೊಲೆ ಕನ್ನಡ ಸಾಹಿತ್ಯ ಚರಿತ್ರೆಗೆ ಕಳಂಕ ತಂದಿದೆ. ಇವರ ಕೊಲೆಯ ಹಿಂದೆ ಮತೀಯ, ಜಾತೀಯವಾದಿಗಳ ಕೈವಾಡವಿದೆ. ಅಲ್ಲದೆ ಕಲಬುರ್ಗಿ, ದಾಭೋಲ್ಕರ್, ಪನ್ಸಾರೆಯವರ ಕೊಲೆಯಲ್ಲಿ ಸಾಮ್ಯತೆಯಿದೆ. ಒಂದು ವರ್ಷ ಕಳೆದರೂ ಡಾ.ಎಂ.ಎಂ. ಕಲಬುರ್ಗಿ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಸಿಐಡಿ ವಿಫಲವಾಗಿದೆ ಅಸಮಾಧಾನ ವ್ಯಕ್ತಪಡಿಸಿದರು.
ತನ್ನ ಒಳಗಿನ ಸತ್ಯಶೋಧಕವನ್ನು ಹೇಳಬೇಕು ಎಂದು ಹಠಕ್ಕೆ ಬಿದ್ದಾಗ ಕಲಬುರ್ಗಿ ಕೊಲೆಯಾಗಿ ಹೋದರು. ಈ ಕೊಲೆಯ ಹಿಂದೆ ವೀರಶೈವರ ಕೈವಾಡವಿದೆ ಎಂದು ಅನುಮಾನ ವ್ಯಕ್ತಪಡಿಸಿದ ಅವರು, ಕೊಲೆ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಹೊತ್ತಿರುವ ಸಿಐಡಿ ತಂಡ ಕೂಡಲೇ ಕೊಲೆಗಡುಕರನ್ನು ಪತ್ತೆ ಹಚ್ಚಿ ಪ್ರಕರಣಕ್ಕೆ ತಾತ್ವಿಕ ಮುಕ್ತಾಯ ಹಾಡಬೇಕು ಎಂದು ಆಗ್ರಹಿಸಿದರು.
ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತ ನಾಡಿ, ಎಂ.ಎಂ.ಕಲಬುರ್ಗಿಯವರು ನಿಜವಾದ ಹೆಸರಿನಲ್ಲಿ ನಾಡೋಜ. ಕನ್ನಡವನ್ನು ಬೆಳೆಸಿದ ಮಹಾನ್ ವಿದ್ವಾಂಸ. ಆದರೆ ಇವರು ರಣ ಹೇಡಿಗಳಿಗೆ ಜೀವತೆತ್ತರು ಎಂದು ನೋವಿನಿಂದ ನುಡಿದರು.
ಕಾರ್ಯಕ್ರಮದಲ್ಲಿ ಎಂ.ಎಂ .ಕಲಬುರ್ಗಿಯವರ ಹತ್ಯೆಯನ್ನು ಖಂಡಿಸಿ ಆ.30ರಂದು ಧಾರವಾಡದಲ್ಲಿ ವೌನ ಮೆರವಣಿಗೆ ನಡೆಸಲು ಸಭಿಕರು ನಿರ್ಧರಿಸಿದರು. ಈ ವೇಳೆ ಚಿಂತಕರಾದ ಡಾ.ಬಿ.ಟಿ.ಲಲಿತಾ ನಾಯಕ್, ಇಂದಿರಾ ಕೃಷ್ಣಪ್ಪ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಟಿಪ್ಪು ಸುಲ್ತಾನ್ ಫ್ರಂಟ್‌ನ ಅಧ್ಯಕ್ಷ ಸರ್ದಾರ್ ಅಹ್ಮದ್ ಖುರೇಶಿ ಸೇರಿದಂತೆ ಇತರರು ಉಪಸ್ಥಿತರಿದ್ದರು.