ಮೋದಿ, ಪಾರಿಕ್ಕರ್ ರಾಜೀನಾಮೆಗೆ ಆಗ್ರಹ
ಬೆಂಗಳೂರು, ಆ. 26: ರಕ್ಷಣಾ ಇಲಾಖೆ ‘ಸ್ಕಾರ್ಪಿನ್ ಯೋಜನೆ’ಯ ಮಹತ್ವದ ಮಾಹಿತಿ ಸೋರಿಕೆ ಯಾಗಿದ್ದು, ಇದರ ನೈತಿಕ ಹೊಣೆ ಹೊತ್ತು ಪ್ರಧಾನಿ ಮೋದಿ, ರಕ್ಷಣಾ ಸಚಿವ ಪಾರಿಕ್ಕರ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮೇಲ್ಮನೆ ಸದಸ್ಯ ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಭಕ್ತಿ, ರಾಷ್ಟ್ರೀಯತೆಯ ಗುತ್ತಿಗೆದಾರರಂತೆ ವರ್ತಿಸುವ ಸಂಘ ಪರಿವಾರದವರು ಎಲ್ಲಿದ್ದಾರೋ ಗೊತ್ತಾಗುತ್ತಿಲ್ಲ. ದೇಶದ ರಕ್ಷಣೆಗೆ ಸಂಬಂಧಿಸಿದ ಮಾಹಿತಿ ಸೋರಿಕೆ ನಿಜಕ್ಕೂ ಆಘಾತಕಾರಿ ಎಂದು ಹೇಳಿದರು.
24ಸಾವಿರ ಕೋಟಿ ರೂ.ವೆಚ್ಚದಲ್ಲಿ ಫಾನ್ಸ್ ಡಿಸಿಎನ್‌ಎಸ್ ಸಹಭಾಗಿತ್ವದಲ್ಲಿ ಕೈಗೊಂಡಿದ್ದ ‘ಸ್ಕಾರ್ಪಿನ್ ಯೋಜನೆ’ಯ ಮಹತ್ವದ ಮಾಹಿತಿ ಚೀನಾಕ್ಕೆ ದೊರೆತಿದೆ ಎಂಬ ಸಂಶಯವಿದೆ ಎಂದು ಅನುಮಾನ ವ್ಯಕ್ತಪಡಿಸಿದ ಅವರು, ಈ ಪ್ರಕರಣವನ್ನು ಮುಚ್ಚಿ ಹಾಕಲು ಕೇಂದ್ರ ಸರಕಾರ ಹುನ್ನಾರ ನಡೆಸಿದೆ ಎಂದರು.
ಪಠಾಣ್ ಕೋಟ್ ಮೇಲಿನ ಉಗ್ರರ ದಾಳಿ ಪ್ರಕರಣವನ್ನು ರಕ್ಷಣಾ ಸಚಿವರು ಸೂಕ್ತ ರೀತಿಯಲ್ಲಿ ನಿರ್ವಹಿಸಲಿಲ್ಲ. ಕಾಶ್ಮೀರ ವಿಚಾರದಲ್ಲಿಯೂ ಕೇಂದ್ರ ಸರಕಾರ ದ್ವಂದ್ವ ನಿಲುವು ಅನುಸರಿಸುತ್ತಿದೆ ಎಂದು ಆರೋಪಿಸಿದ ಅವರು, ರಕ್ಷಣಾ ಮಾಹಿತಿ ಸೋರಿಕೆ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ನಕಲಿ ದೇಶಭಕ್ತಿ: ‘ಆಮ್ನೆಸ್ಟಿ’ ಇಂಟರ್ ನ್ಯಾಷನಲ್ ಏರ್ಪಡಿಸಿದ್ದ ಸಂವಾದದಲ್ಲಿ ‘ಆಝಾದಿ’ ಘೋಷಣೆ ನೆಪದಲ್ಲಿ ಹೋರಾಟ ಕೈಗೊಂಡಿದ್ದ ಎಬಿವಿಪಿ, ದೇಶದ ರಕ್ಷಣಾ ಮಾಹಿತಿ ಸೋರಿಕೆಯ ಬಗ್ಗೆ ವೌನ ವಹಿಸಿರು ವುದೇಕೆ ಎಂದು ಪ್ರಶ್ನಿಸಿದ ಅವರು, ನಕಲಿ ದೇಶಭಕ್ತಿಯನ್ನು ಮೊದಲು ನಿಲ್ಲಿಸಬೇಕು ಎಂದು ವ್ಯಂಗ್ಯವಾಡಿದರು.
ಹಠಮಾರಿ ಧೋರಣೆ ಸಲ್ಲ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಆ ಭಾಗದ ಎಲ್ಲ ಜಲಾಶಯಗಳಲ್ಲಿ ನೀರಿಲ್ಲ. ಆದುದರಿಂದ ತಮಿಳುನಾಡಿನ ‘ನೀರು ಬಿಡಲೇಬೇಕು’ ಎಂಬ ಹಠಮಾರಿ ಧೋರಣೆ ಸರಿಯಲ್ಲ ಎಂದು ಉಗ್ರಪ್ಪ ಆಕ್ಷೇಪಿಸಿದರು.
ಕೆಆರ್‌ಎಸ್, ಹಾರಂಗಿ, ಕಬಿನಿ ಹಾಗೂ ಹೇಮಾವತಿ ಸೇರಿ ಒಟ್ಟು 63 ಟಿಎಂಸಿ ನೀರಿದ್ದು, ಆ ಪೈಕಿ ಕೇವಲ 39 ಟಿಎಂಸಿಯಷ್ಟು ನೀರನ್ನು ಬಳಕೆ ಮಾಡಿಕೊಳ್ಳಬಹುದು. ವಾಸ್ತವ ಸ್ಥಿತಿ ಹೀಗಿರುವಾಗ ತಮಿಳುನಾಡು 50 ಟಿಎಂಸಿ ನೀರು ಕೇಳುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ ಸೇರಿದಂತೆ ಆ ಭಾಗದ ನೂರಾರು ಹಳ್ಳಿಗಳಿಗೆ ಕುಡಿಯಲು 30ಟಿಎಂಸಿ ನೀರು ಬೇಕು ಎಂದ ಅವರು, ನೆಲ-ಜಲದ ವಿಚಾರದಲ್ಲಿ ಯಾವುದೇ ಪಕ್ಷ ರಾಜಕೀಯ ಮಾಡುವುದು ಯಾರಿಗೂ ಶೋಭೆಯಲ್ಲ ಎಂದು ಪರೋಕ್ಷವಾಗಿ ಕುಮಾರಸ್ವಾಮಿಯನ್ನು ಟೀಕಿಸಿದರು.
ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿ ಕೊಡಲು ಕರ್ನಾಟಕ ಸರಕಾರ ದೊಂದಿಗೆ ಕೇಂದ್ರ ಸರಕಾರವೂ ಕೈಜೋಡಿಸಬೇಕು. ಕೆಂದ್ರ ಸರಕಾರ ಜವಾಬ್ದಾರಿ ಇದೆ ಎಂದ ಅವರು, ಮಳೆ ಆಗುವವರೆಗೂ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದರು.
‘ಸಂಘ ಪರಿವಾರದ ನಕಲಿ ದೇಶಭಕ್ತರಿಗೆ ಸತ್ಯವನ್ನು ಜೀರ್ಣಿಸಿಕೊಳ್ಳಲು ಆಗುವುದಿಲ್ಲ. ಹೀಗಾಗಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಪ್ರಧಾನಿ ಮೋದಿಯವರು, ನವಾಝ್ ಶರೀಫ್ ಹುಟ್ಟುಹಬ್ಬದ ನಿಮಿತ್ತ ಪಾಕಿಸ್ತಾನಕ್ಕೆ ಭೇಟಿ ನೀಡಿದ ಬಳಿಕ ಅವರು ಟ್ವಿಟರ್‌ನಲ್ಲಿ ಏನೆಲ್ಲ ಹೇಳಿದ್ದಾರೆಂಬುದನ್ನು ನೋಡಿ ರಮ್ಯಾ ವಿರುದ್ಧ ಪ್ರತಿಭಟನೆ ಮಾಡಲಿ’
-ವಿ.ಎಸ್.ಉಗ್ರಪ್ಪ, ಮೇಲ್ಮನೆ ಸದಸ್ಯ