×
Ad

ಶಿವಮೊಗ್ಗದ ಕುಖ್ಯಾತ ರೌಡಿಗಳು ವಿದೇಶದಲ್ಲಿ !

Update: 2016-08-27 22:12 IST

ಶಿವಮೊಗ್ಗ, ಆ.27: ಶಿವಮೊಗ್ಗದ ಕುಖ್ಯಾತ ರೌಡಿ, ಪ್ರಸ್ತುತ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಹೆಬ್ಬೆಟ್ಟು ಮಂಜ ಸೇರಿದಂತೆ ರಾಜ್ಯಕ್ಕೆ ಸೇರಿದ ನಾಲ್ವರು ಭೂಗತ ಪಾತಕಿಗಳ ಬಂಧನಕ್ಕೆ ಮತ್ತೆ ಹೊಸದಾಗಿ ಇಂಟರ್‌ಪೋಲ್ ಸಂಸ್ಥೆಯು ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದೆ.

ಇಂಟರ್‌ಪೋಲ್ ಮೂಲಕ ಬೆಂಗಳೂರಿನ ಅಪರಾಧ ಪತ್ತೆ ದಳ ಪೊಲೀಸ(ಸಿಸಿಬಿ)ರು ಈ ನಾಲ್ವರು ಪಾತಕಿಗಳ ಬಂಧನಕ್ಕೆ ಕಾರ್ಯತಂತ್ರ ರೂಪಿಸಿರುವ ಮಾಹಿತಿ ಬೆಳಕಿಗೆ ಬಂದಿದೆ.

ಹೆಬ್ಬೆಟ್ಟು ಮಂಜನ ಜೊತೆಗೆ ಕಲಿ ಯೋಗೀಶ್, ರವಿ ಪೂಜಾರಿ ಹಾಗೂ ಕೊರಗ ವಿಶ್ವನಾಥ ಶೆಟ್ಟಿ ರೆಡ್ ಕಾರ್ನರ್ ನೋಟಿಸ್ ಜಾರಿಯಾದ ಭೂಗತ ಪಾತಕಿಗಳೆಂದು ಗುರುತಿಸಲಾಗಿದೆ. ಕಳೆದ ಹಲವು ವರ್ಷಗಳ ಹಿಂದೆಯೇ ಈ ಎಲ್ಲ ಪಾತಕಿಗಳು ದೇಶ ತೊರೆದಿದ್ದಾರೆ. ಪ್ರಸ್ತುತ ದುಬೈ, ಕೀನ್ಯ, ಆಸ್ಟ್ರೇಲಿಯ, ಬ್ಯಾಂಕಾಕ್ ಸೇರಿದಂತೆ ನಾನಾ ದೇಶಗಳಲ್ಲಿ ಓಡಾಡಿಕೊಂಡಿದ್ದಾರೆ. ಕೊಲೆ, ಕೊಲೆಯತ್ನ, ಸುಲಿಗೆ, ಜೀವ ಬೆದರಿಕೆ ಸೇರಿದಂತೆ ನಾನಾ ರೀತಿಯ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಈ ಪಾತಕಿಗಳು ಕರ್ನಾಟಕ ಪೊಲೀಸರಿಗೆ ಬೇಕಾಗಿದ್ದಾರೆ. ಕಳೆದ ಕೆಲ ವರ್ಷಗಳ ಹಿಂದೆಯೇ ಈ ಪಾತಕಿಗಳ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿತ್ತು. ಆದರೆ ಪಾತಕಿಗಳ ಇತ್ತೀಚಿನ ಚಲನವಲನಗಳ ಬಗ್ಗೆ ಪೊಲೀಸರು ಇಂಟರ್‌ಪೋಲ್ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ. ಇದೀಗ ಈ ಪಾತಕಿಗಳ ಇತ್ತೀಚಿನ ಚಲನವಲನಗಳ ಸಮಗ್ರ ಮಾಹಿತಿ, ಬಳಕೆ ಮಾಡುತ್ತಿರುವ ಪಾಸ್‌ಪೋರ್ಟ್, ಸ್ಯಾಟಲೈಟ್ ಫೋನ್, ಎರಡೂ ಕೈಗಳ 10 ಬೆರಳುಗಳ ಫಿಂಗರ್‌ಪ್ರಿಂಟ್ ಮಾಹಿತಿ ಸೇರಿದಂತೆ ಅವರ ಬಂಧನಕ್ಕೆ ಅಗತ್ಯವಾದ ಎಲ್ಲ ರೀತಿಯ ತಾಂತ್ರಿಕ ವಿವರಗಳನ್ನು ಬೆಂಗಳೂರು ಸಿಸಿಬಿ ಪೊಲೀಸರು ಇತ್ತೀಚೆಗೆ ದಿಲ್ಲಿಯಲ್ಲಿರುವ ಸಿಬಿಐ ಕೇಂದ್ರ ಕಚೇರಿಗೆ ತಲುಪಿಸಿದ್ದರು. ಸಿಬಿಐ ಸಂಸ್ಥೆಯು ಈ ಾಹಿತಿಯನ್ನು ಇಂಟರ್‌ಪೋಲ್‌ಗೆ ರವಾನಿಸಿತ್ತು. ಇದರ ಆಧಾರದ ಮೇಲೆ ನಾಲ್ವರು ಆರೋಪಿಗಳ ವಿರುದ್ಧ ಮತ್ತೆ ಹೊಸದಾಗಿ ರೆಡ್ ಕಾರ್ನರ್ ನೋಟಿಸ್ ಾರಿಗೊಳಿಸುವ ಮೂಲಕ ಬಂಧನಕ್ಕೆ ಬೆಂಗಳೂರು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ. ಕಳೆದ ಕೆಲ ತಿಂಗಳುಗಳ ಹಿಂದಷ್ಟೇ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಭೂಗತ ಪಾತಕಿ ಬನ್ನಂಜೆ ರಾ

ಜನನ್ನು ಇಂಟರ್‌ಪೋಲ್ ಪೊಲೀಸರ ಮೂಲಕ ಬಲೆಗೆ ಬೀಳಿಸಿಕೊಳ್ಳುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದರು. ಪಾಸ್‌ಪೋರ್ಟ್: ಶಿವಮೊಗ್ಗ ಭೂಗತ ಲೋಕದ ಕುಖ್ಯಾತ ರೌಡಿ ಹೆಬ್ಬೆಟ್ಟು ಮಂಜನು ಮಂಗಳೂರಿನಿಂದ ಪಾಸ್‌ಪೋರ್ಟ್ ಮಾಡಿಸಿದ್ದ. ಕುಖ್ಯಾತ ರೌಡಿ ಕೊರಂಗು ಕೃಷ್ಣನ ಮೇಲೆ ಹಿರಿಯೂರು ಬಳಿ ದಾಳಿ ನಡೆಸಿದ್ದ ಹೆಬ್ಬೆಟ್ಟು ವುಂಜನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. ತದನಂತರ ಜಾಮೀನಿನ ಮೇಲೆ ಹೊರಬಂದ ಆರೋಪಿಯು ಎರಡು ವರ್ಷಗಳ ನಂತರ ಮುಂಬೈ ಮೂಲಕ ವಿದೇಶಕ್ಕೆ ಪರಾರಿಯಾಗಿದ್ದ. ಹೆಬ್ಬೆಟ್ಟು ಮಂಜನ ವಿರುದ್ಧ ಬೆಂಗಳೂರು ಹಾಗೂ ಶಿವಮೊಗ್ಗದಲ್ಲಿ 13 ಕೇಸ್‌ಗಳು ದಾಖಲಾಗಿವೆ.

ಪಾತಕಿಗಳೊಂದಿಗೆ ಸಂಪರ್ಕದಲ್ಲಿರುವವರ ವಿವರ ಸಂಗ್ರಹ

: ಭೂಗತ ಪಾತಕಿಗಳು ಬೆಂಗಳೂರು ಹಾಗೂ ಕರ್ನಾಟಕದ ಇತರೆಡೆ ಹೊಂದಿರುವ ಸಂಪರ್ಕಗಳ ಸಮಗ್ರ ಮಾಹಿತಿಯನ್ನು ಸಿಸಿಬಿ ಪೊಲೀಸರು ಕಲೆ ಹಾಕಿದ್ದಾರೆ. ಸ್ಯಾಟಲೈಟ್‌ಫೋನ್ ಮೂಲಕ ಯಾರ್ಯಾರೊಂದಿಗೆ ಸಂಪರ್ಕದಲ್ಲಿದ್ದರು ಎಂಬಿತ್ಯಾದಿ ವಿವರಗಳನ್ನು ಗುಪ್ತವಾಗಿ ಸಂಗ್ರಹಿಸಿದ್ದಾರೆ. ಇದು ಭೂಗತ ಪಾತಕಿಗಳೊಂದಿಗೆ ಸಂಪರ್ಕದಲ್ಲಿರುವವರಲ್ಲಿ ತಳಮಳ ಸೃಷ್ಟಿಸುವಂತೆ ಮಾಡಿದೆ. ಪಾತಕಿಗಳ ವಿರುದ್ಧ ಮತ್ತೆ ಹೊಸದಾಗಿ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿರುವುದರಿಂದ ಬಂಧನ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಏನಿದು ರೆಡ್ ಕಾರ್ನರ್ ನೋಟಿಸ್?

: ಇಂಟರ್‌ಪೋಲ್ ಎನ್ನುವುದು ಅಂತಾ ರಾಷ್ಟ್ರೀಯ ಮಟ್ಟದ ಪೊಲೀಸ್ ಸಂಸ್ಥೆ ಯಾಗಿದೆ. ಇದರಲ್ಲಿ ಭಾರತ ಸೇರಿದಂತೆ 190 ರಾಷ್ಟ್ರಗಳು ಸದಸ್ಯತ್ವ ಹೊಂದಿವೆ. ಅಪರಾಧ ಕೃತ್ಯ ಎಸಗಿ ಮತ್ತೊಂದು ರಾಷ್ಟ್ರಕ್ಕೆ ಪಲಾಯನ ಮಾಡಿದವರ ಬಂಧನದಲ್ಲಿ ಇಂಟರ್‌ಪೋಲ್ ಪೊಲೀಸರು ಮಹತ್ವದ ಪಾತ್ರವಹಿಸಲಿದ್ದಾರೆ. ಆಯಾ ರಾಷ್ಟ್ರ ನೀಡುವ ಮಾಹಿತಿಯ ಅನುಸಾರ ಈ ಸಂಸ್ಥೆಯು ಕ್ರಿಮಿನಲ್‌ಗಳ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುತ್ತದೆ. ಇದರಿಂದ ಬೇರೊಂದು ರಾಷ್ಟ್ರದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಸಹಕಾರಿಯಾಗಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News