×
Ad

ಮಕ್ಕಳ ಕ್ರೀಡಾ ಪ್ರತಿಭೆಗೆ ಪ್ರೋತ್ಸಾಹಿಸಿ: ಡಿ.ಗಣಪತಪ್ಪ

Update: 2016-08-27 22:13 IST

ಸಾಗರ, ಆ.27: ದೈಹಿಕ ಹಾಗೂ ಮಾನಸಿಕ ದೃಢತೆ ಹೆಚ್ಚಿಸುವ ನಿಟ್ಟಿನಲ್ಲಿ ಕ್ರೀಡೆ ಸಹಕಾರಿ. ವಿದ್ಯಾರ್ಥಿಗಳನ್ನು ಪ್ರಾಥಮಿಕ ಹಂತದಿಂದ ಸಜ್ಜುಗೊಳಿಸಿದಾಗ ಮಾತ್ರ ಅವರು ಪರಿಪೂರ್ಣ ವ್ಯಕ್ತಿಗಳಾಗುತ್ತಾರೆ ಎಂದು ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಿ.ಗಣಪತಪ್ಪ ಹೇಳಿದರು.

ಇಲ್ಲಿನ ನೆಹರೂ ಮೈದಾನದಲ್ಲಿ ಶನಿವಾರ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉತ್ತರ ವಲಯಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಹ ಆಸಕ್ತಿ ಹುಟ್ಟಿಸುವಂತೆ ನೋಡಿಕೊಳ್ಳುವ ಅಗತ್ಯವಿದೆ. ಭವಿಷ್ಯ ರೂಪಿಸಿಕೊಳ್ಳಲು ಅಂಕವೊಂದೇ ಮಾನದಂಡ ವಾಗುವುದಿಲ್ಲ. ಕ್ರೀಡೆ, ಸಾಂಸ್ಕೃತಿಕ, ಸಾಹಿತ್ಯಕ ಚಟುವಟಿಕೆಗಳಲ್ಲೂ ಮಕ್ಕಳು ಪಾಲ್ಗೊಳ್ಳುವಂತೆ ಶಿಕ್ಷಕರು ಹಾಗೂ ಪೋಷಕರು ಪ್ರೋತ್ಸಾಹ ನೀಡಬೇಕು. ಇಂತಹ ವಲಯ ಮಟ್ಟದ ಕ್ರೀಡಾಕೂಟಗಳ ಮೂಲಕ ಮಕ್ಕಳ ಕ್ರೀಡಾ ಪ್ರತಿಭೆ ಬೆಳೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮವನ್ನು ಗುಂಡು ಎಸೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ನಗರಸಭೆ ಸದಸ್ಯೆ ಸಬಾನಾ ಬಾನು, ಬದಲಾದ ದಿನಮಾನಗಳಲ್ಲಿ ಕ್ರೀಡೆಗೆ ಹೆಚ್ಚಿನ ಉತ್ತೇಜನ ಸಿಗುತ್ತಿಲ್ಲ. ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಕ್ರೀಡಾಸಕ್ತಿಯನ್ನು ಬೆಳೆಸಬೇಕು. ಉತ್ತಮವಾಗಿ ಆಡುವ ವಿದ್ಯಾರ್ಥಿಗಳಿಗೆ ಹೆಚ್ಚಿನ ತರಬೇತಿ ನೀಡಿ, ಅವರು ಉನ್ನತ ಸಾಧನೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಹೇಳಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಜ್ಯೋತಿ ರೀನಾ ಅಂದ್ರಾದೆ, ದೈಹಿಕ ಶಿಕ್ಷಣ ಪರಿವೀಕ್ಷಕ ಕೆ.ಎನ್.ಗಾವಡಿ, ಶಿಕ್ಷಣ ಸಂಯೋಜಕ ರವೀಂದ್ರ, ಸಮೂಹ ಸಂಪನ್ಮೂಲ ವ್ಯಕ್ತಿ ಮಾಲತೇಶ್, ಎಸ್‌ಡಿಎಂಸಿ ಅಧ್ಯಕ್ಷ ದಿವಾಕರ್ ಎಂ.ಎಸ್., ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ಬಿ. ಬಿಳಿಕೇರಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News