ಸರಕಾರಿ ಶಾಲೆಯ ಕಲಿಕೆಯಿಂದ ಉನ್ನತ ಹುದ್ದೆ: ಅಬಕಾರಿ ಉಪ ಆಯುಕ್ತ ವೈ.ಆರ್. ಮೋಹನ್
ಸೊರಬ, ಆ.27: ಸರಕಾರಿ ಶಾಲೆಯಲ್ಲಿ ಅಧ್ಯಯನ ಮಾಡಿದವರು ರಾಷ್ಟ್ರಮಟ್ಟದಲ್ಲಿ ಅಧಿಕಾರ ಮಾಡಿದ್ದಲ್ಲದೆ, ಉನ್ನತ ಉದ್ಯೋಗದಲ್ಲಿರುವುದನ್ನು ಮನಗಂಡಾ ದರೂ ಈ ಶಾಲೆಗಳ ಮಹತ್ವವನ್ನು ಜನರು ಅರಿಯಬೇಕಿದೆ ಎಂದು ಅಬಕಾರಿ ಉಪ ಆಯುಕ್ತ ವೈ.ಆರ್. ಮೋಹನ್ ಹೇಳಿದರು.
ತಾಲೂಕಿನ ಕೊಡಕಣಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಶಾಲೆಗೆ ಬನ್ನಿ ಶನಿವಾರ; ಕಲಿಯಲು ನೀಡಿ ಸಹಕಾರ’ ಕಾರ್ಯ ಕ್ರಮದಡಿಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಜನರು ಸರಕಾರಿ ಶಾಲೆಗಳ ಬಗ್ಗೆ ತಪ್ಪು ತಿಳುವಳಿಕೆಯನ್ನು ಹೊಂದಬಾರದು. ಸರಕಾರಿ ಶಾಲೆಗಳಿಗೆ ಅದರದ್ದೇ ಆದ ಇತಿಹಾಸವಿದೆ. ಇಲ್ಲಿ ಅಧ್ಯಯನ ಮಾಡಿದವರು ರಾಜಕೀಯ, ಆಡಳಿತಾತ್ಮಕ ಹಾಗೂ ಶೈಕ್ಷಣಿಕವಾಗಿ ಉನ್ನತ ಮಟ್ಟದಲ್ಲಿರುವುದನ್ನು ನೆನಪಿಸಿಕೊಳ್ಳಬೇಕಿದೆ. ಗ್ರಾಮೀಣ ವಿದ್ಯಾರ್ಥಿಗಳು ನಗರದ ಶಾಲೆಗಳಿಗೆ ಮುಖ ಮಾಡದಂತೆ ಅವರಿಗೆ ಪೋಷಕರು ಗ್ರಾಮೀಣ ಶಾಲೆಗಳ ಸಂಪನ್ಮೂಲವನ್ನು ಬಳಸಿಕೊಂಡು ಗುಣಾತ್ಮಕವಾದ ಶಿಕ್ಷಣವನ್ನು ಪಡೆಯಲು ಪ್ರೇರೇಪಿಸಬೇಕು ಎಂದರು.
ಮುಖ್ಯ ಶಿಕ್ಷಕಿ ರತ್ನಮ್ಮ ಮಾತನಾಡಿದರು. ಕಳೆದ ವರ್ಷ 7ನೆ ತರಗತಿಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಅಂಜಲಿ ಹಾಗೂ ದೀಪಿಕಾ ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಷಡಕ್ಷರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ಗ್ರಾಪಂ ಅಧ್ಯಕ್ಷೆ ನಾಗರತ್ನಾ ಬಸಪ್ಪ, ಉಪಾಧ್ಯಕ್ಷ ಕೃಷ್ಣಮೂರ್ತಿ, ಸದಸ್ಯರಾದ ಗೂಳಿ ಹೂವಪ್ಪ, ಚಿನ್ನಪ್ಪ, ಗ್ರಾಮ ಸಮಿತಿ ಅಧ್ಯಕ್ಷ ನೆಹರೂ, ಎಸ್‌ಡಿಎಂಸಿ ಸದಸ್ಯರಾದ ರಾಮಪ್ಪ, ಯುವರಾಜಪ್ಪ ಮತ್ತಿತರರು ಇದ್ದರು.