×
Ad

ಕರ್ತವ್ಯ ಮರೆತರೆ ಸೂಕ್ತ ಕ್ರಮದ ಎಚ್ಚರಿಕೆ

Update: 2016-08-27 22:16 IST

ಕಾರವಾರ, ಆ. 27: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅತಿಕ್ರಮಿತ ಕೆರೆ ಕುಂಟೆಗಳನ್ನು ಗುರುತಿಸಿ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಕಂದಾಯ ಸಚಿವ ಕಾಗೋಡು ತಿಮ್ಮಪ್ಪಅವರು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಬಳಿಕ ಮಾತನಾಡುತ್ತಿದ್ದರು. ಸರಕಾರಿ ಜಮೀನುಗಳ ಅತಿಕ್ರಮಣ ಗುರುತಿಸಿ ಅವುಗಳನ್ನು ವಶಕ್ಕೆ ಪಡೆಯಬೇಕು. ವಶಕ್ಕೆ ಪಡೆದ ಜಮೀನಿಗೆ ಬೇಲಿ ಹಾಕಬೇಕು. ಕೆರೆ ಕಾಲುವೆಗಳನ್ನು ಯಾರಾದರೂ ಅತಿಕ್ರಮಿಸಿದ್ದರೆ ಅವುಗಳನ್ನೂ ತಕ್ಷಣ ಖುಲಾಸೆಗೊಳಿಸಬೇಕು. ಅತಿಕ್ರಮಣ ಕುರಿತು ಯಾವುದೇ ದೂರಿಗೆ ಕಾಯದೆ ಸಂಬಂಧಪಟ್ಟ ತಹಶೀಲ್ದಾರ್ ಸ್ವಯಂ ಪ್ರೇರಿತರಾಗಿ ಕ್ರಮ ಕೈಗೊಳ್ಳಬೇಕು. ಅತಿಕ್ರಮ ತೆರವಿಗೆ ನಿರ್ಲಕ್ಷ್ಯವಹಿಸಿದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಗಾರನ್ನಾಗಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಅರಣ್ಯ ಹಕ್ಕು ಪತ್ರ: ವಿವಿಧ ಕಾರಣಗಳಿಂದ ಅರಣ್ಯ ಹಕ್ಕು ಪತ್ರ ಅರ್ಜಿ ವಿಲೇವಾರಿ ಕಾರ್ಯ ವಿಳಂಬವಾಗಿದೆ. ಕಾಯ್ದೆ ಮಾರ್ಗಸೂಚಿ ಪ್ರಕಾರ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಕಾಯ್ದೆಯಲ್ಲಿ ಸ್ಪಷ್ಟ ನಿರ್ದೇಶನಗಳನ್ನು ನೀಡಲಾಗಿದ್ದು, ಈ ಕುರಿತು ಸರಕಾರದಿಂದ ಇನ್ನೊಂದು ಆದೇಶವನ್ನು ಹೊರಡಿಸಲಾಗುವುದು. ಜಿಲ್ಲೆಯಲ್ಲಿ ಗ್ರಾಮ ಠಾಣಾ ಜಮೀನುಗಳಲ್ಲಿ ವಾಸಿಸುತ್ತಿರುವವರಿಗೆ ಹಕ್ಕುಪತ್ರಗಳನ್ನು ವಿತರಿಸಲು ಅವಕಾಶವಿದೆ. ಅಂತಹವರಿಂದ ಅರ್ಜಿಗಳನ್ನು ಸ್ವಯಂ ಪಡೆದುಕೊಂಡು ಹಕ್ಕುಪತ್ರ ವಿತರಿಸಬೇಕು. ಈ ಕುರಿತು ಎಲ್ಲಾ ತಾಲೂಕುಗಳಲ್ಲಿ ಕಾರ್ಯನಿರ್ವಹಣಾಧಿಕಾರಿ, ಪಿಡಿಒಗಳ ಸಭೆಯನ್ನು ನಡೆಸಿ ಮಾಹಿತಿಯನ್ನು ಒದಗಿಸಬೇಕು ಎಂದು ಅವರು ತಿಳಿಸಿದರು.

ಬಾಕಿ ಉಳಿದಿರುವ ಬಗರ್‌ಹುಕುಂ ಪ್ರಕರಣಗಳನ್ನು ಒಂದು ತಿಂಗಳ ಒಳಗಾಗಿ ಬಗೆಹರಿಸಬೇಕು. ಪಡಿತರ ವಿತರಣೆ ಕುರಿತು ಯಾವುದೇ ದೂರುಗಳು ಬಂದಲ್ಲಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಪ್ರತಿಯೊಬ್ಬರಿಗೂ ಪಡಿತರ ಸಾಮಗ್ರಿ ದೊರಕುವ ನಿಟ್ಟಿನಲ್ಲಿ ಸೌಲಭ್ಯಗಳನ್ನು ಸ್ಥಳೀಯವಾಗಿ ಒದಗಿಸಬೇಕು ಎಂದರು.

ಪ್ರತಿ ಊರುಗಳಲ್ಲಿ ರುದ್ರಭೂಮಿ ಇರುವಂತೆ ನೋಡಿಕೊಳ್ಳಬೇಕು. ಸರಕಾರಿ ಹಾಸ್ಟೆಲ್, ಮೊರಾರ್ಜಿ ದೇಸಾಯಿ ವಸತಿ ಶಾಲೆ ಇತ್ಯಾದಿಗಳಿಗೆ ಆದ್ಯತೆ ಮೇರೆಗೆ ಜಮೀನು ಒದಗಿಸಬೇಕು. ಗ್ರಾಮ ಲೆಕ್ಕಿಗರು ಮತ್ತು ಕಂದಾಯ ಅಧಿಕಾರಿಗಳು ತಮ್ಮ ಕರ್ತವ್ಯ ಸ್ಥಳದಲ್ಲಿಯೇ ವಾಸ್ತವ್ಯ ಮಾಡಬೇಕು. ಅವರಿಗೆ ವಸತಿಗೃಹಗಳನ್ನು ನಿರ್ಮಿಸಲು ನಿವೇಶನ ಗುರುತಿಸಿದರೆ, ಮನೆ ನಿರ್ಮಾಣಕ್ಕೆ ಅನುದಾನ ಒದಗಿಸಲಾಗುವುದು. ಈ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಬೇಕು. ಕಂದಾಯ ವಸೂಲಾತಿಯನ್ನು ಚುರುಕುಗೊಳಿಸಬೇಕು. ಆಯಾ ವರ್ಷದ ಕಂದಾಯವನ್ನು ಅದೇ ವರ್ಷ ವಸೂಲು ಮಾಡಬೇಕು. ಕಡತ ವಿಲೇವಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ, ಶಾಸಕರಾದ ಸತೀಶ್ ಸೈಲ್, ಶಿವರಾಮ ಹೆಬ್ಬಾರ, ಶಾರದಾ ಶೆಟ್ಟಿ, ಜಿಲ್ಲಾಧಿಕಾರಿ ಎಸ್.ಎಸ್. ನಕುಲ್, ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಜಿಲ್ಲೆಯಲ್ಲಿ 1, 173ಅರಣ್ಯ ಹಕ್ಕು ಸಮಿತಿಗಳನ್ನು ರಚಿಸಲಾಗಿದ್ದು, ನಗರ ಪ್ರದೇಶಗಳಲ್ಲಿ 213ವಾರ್ಡ್ ಅರಣ್ಯ ಹಕ್ಕು ಸಮಿತಿಗಳನ್ನು ರಚಿಸಲಾಗಿದೆ. ಈ ವರೆಗೆ 91,110 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಇವುಗಳಲ್ಲಿ 38, 340ಅರ್ಜಿಗಳ ಪರಿಶೀಲನೆ ಕಾರ್ಯ ಪೂರ್ಣಗೊಂಡಿದೆ

<ಕಾಗೋಡು ತಿಮ್ಮಪ್ಪ

 ರಾಜ್ಯ ಕಂದಾಯ ಸಚಿವ

ಹೋಬಳಿಗಳಲ್ಲಿ ಜನಸ್ಪಂದನ ಸಭೆ:

ಜನ ಸ್ಪಂದನ ಸಭೆಗಳು ನಿರಂತರ ಪ್ರಕ್ರಿಯೆಯಾಗಿದೆ. ಪ್ರತಿಯೊಂದು ಹೋಬಳಿ ಮಟ್ಟದಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಜನ ಸ್ಪಂದನ ಸಭೆಗಳನ್ನು ಆಯೋಜಿಸಬೇಕು ಎಂದು ಸಚಿವ ಕಾಗೋಡು ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News