×
Ad

ನಾಳೆಯಿಂದ ಶಿವಮೊಗ್ಗ ನಗರಾದ್ಯಂತ ಸರಕಾರಿ ಸಿಟಿ ಬಸ್ ಆರಂಭ

Update: 2016-08-27 22:19 IST

 ಶಿವಮೊಗ್ಗ, ಆ.27: ಶಿವಮೊಗ್ಗ ನಗರದ ಲಕ್ಷಾಂತರ ನಾಗರಿಕರು ಕಳೆದೆರಡು ವರ್ಷಗಳಿಂದ ಜಾತಕ ಪಕ್ಷಿಯಂತೆ ಎದುರು ನೋಡುತ್ತಿದ್ದ ಸರಕಾರಿ ಸಿಟಿ ಬಸ್‌ಗಳ ಸಂಚಾರಕ್ಕೆ ಮೂಹೂರ್ತ ನಿಗದಿಯಾಗಿದ್ದು, ಆ. 29 ರಿಂದ ನಗರದಲ್ಲಿ ಅಧಿಕೃತವಾಗಿ ಸರಕಾರಿ ಸಿಟಿ ಬಸ್‌ಗಳು ರಸ್ತೆಗಿಳಿಯಲಿವೆ. ಇದರಿಂದ ನಗರ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆಯ ಪರ್ವ ಆರಂಭವಾಗಲಿದೆ. ಸರಕಾರಿ ಸಿಟಿ ಬಸ್ ಸಂಚಾರದ ವಿಚಾರವನ್ನು ಸ್ಥಳೀಯ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಸ್ಪಷ್ಟಪಡಿಸಿದ್ದು, ಜೆನರ್ಮ್ ಯೋಜನೆಯಡಿ ಶಿವಮೊಗ್ಗ ನಗರಕ್ಕೆ ಮಂಜೂರಾಗಿರುವ ಸರಕಾರಿ ಸಿಟಿ ಬಸ್‌ಗಳ ಸಂಚಾರವು ಆ. 29 ರಿಂದ ಆರಂಭವಾಗಲಿದೆ. ಅಂದು ಬೆಳಗ್ಗೆ 10 ಗಂಟೆಗೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪಅವರು ಸಿಟಿ ಬಸ್‌ಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಒಟ್ಟಾರೆ ಶಿವಮೊಗ್ಗಕ್ಕೆ 65 ಬಸ್‌ಗಳು ಮಂಜೂರಾಗಿವೆ. ಪ್ರಸ್ತುತ 20 ಬಸ್‌ಗಳು ಸಂಚಾರ ಆರಂಭಿಸಲಿವೆ. ಹಂತಹಂತವಾಗಿ ಉಳಿದ 45 ಬಸ್‌ಗಳು ನಗರದಲ್ಲಿ ಓಡಾಟ ಆರಂಭಿಸಲಿದ್ದು, 20 ಬಸ್‌ಗಳು ಸಂಚರಿಸುವ ಮಾರ್ಗ ಪಟ್ಟಿಯನ್ನು ಕೆಎಸ್ಸಾರ್ಟಿಸಿ ಅಧಿಕಾರಿಗಳು ಸಿದ್ಧಪಡಿಸಿದ್ದಾರೆ ಎಂದರು.

ವಿಳಂಬಕ್ಕೆ ಕಾರಣ:  ಜೆನರ್ಮ್ ಬಸ್ ಸಂಚಾರ ವಿಳಂಬಕ್ಕೆ ಕೇಂದ್ರದಲ್ಲಿ ಸರಕಾರ ಬದಲಾವಣೆಯೇ ಮುಖ್ಯ ಕಾರಣ. ಹಾಲಿ ಕೇಂದ್ರ ಸರಕಾರ ಈ ಹಿಂದಿನ ಸರಕಾರ ರೂಪಿಸಿದ್ದ ಮಾರ್ಗಸೂಚಿಯನ್ನು ಬದಲಾಯಿಸಿ, ಬಸ್ ಖರೀದಿಯಲ್ಲಿ ಶೇ. 50 ರಷ್ಟನ್ನು ರಾಜ್ಯವೇ ಭರಿಸಬೇಕೆಂಬ ಹೊಸ ನೀತಿ ರೂಪಿಸಿತ್ತು. ಅಲ್ಲದೆ, ಮೊಲು ಖರೀದಿಸಲಾಗಿದ್ದ ಬಸ್‌ಗಳು ನಿಗದಿತ ಮೈಲೇಜ್ ನೀಡದ ಕಾರಣ ಅವುಗಳನ್ನು ರದ್ದುಗೊಳಿಸಿ ಬೇರೆ ಕಂಪೆನಿಗೆ ಟೆಂಡರ್ ನೀಡಿದ್ದ ಕಾರಣ ಬಸ್ ಸಂಚಾರ ವಿಳಂಬವಾಯಿತು ಎಂದರು.

ಅನುದಾನ: ನೆಹರೂ ಸ್ಟೇಡಿಯಂನ ಮೇಲ್ಛಾವಣಿ ನಶಿಸುತ್ತಿರುವುದರಿಂದ ಹೊಸದಾಗಿ ಮೇಲ್ಛಾವಣಿ ಹಾಕಲು 25 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಸೆ.1 ರಂದು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಶಿಲಾನ್ಯಾಸ ನೆರವೇರಿಸುವರು. ಅದೇ ದಿನ ಅಶೋಕ ನಗರದಲ್ಲಿ 34 ಲಕ್ಷ ರೂ. ಯಲ್ಲಿ ನಿರ್ಮಿಸಲಾಗಿರುವ ಒಳಾಂಗಣ ಷಟಲ್ ಕೋರ್ಟ್‌ನ್ನು ಸಚಿವರು ಉದ್ಘಾಟಿಸುವರು ಎಂದು ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ಸೂಡಾ ಅಧ್ಯಕ್ಷ ಎನ್. ರಮೇಶ್, ಮಹಾನಗರ ಪಾಲಿಕೆ ಸದಸ್ಯರಾದ ವಿಶ್ವನಾಥ್ ಕಾಶಿ, ಆಸಿಫ್, ರಘು, ಮುಖಂಡರಾದ ನಾಗರಾಜ್, ದೀಪಕ್ ಸಿಂಗ್ ಮೊದಲಾದವರಿದ್ದರು.

ಬಸ್‌ನಿಲ್ದಾಣ, ವರ್ಕ್‌ಶಾಪ್, ಡಿಪೋ ನಿರ್ಮಾಣಕ್ಕೆ ಕ್ರಮ :

ಸರಕಾರಿ ಸಿಟಿ ಬಸ್‌ಗಳಿಗೆ ಪ್ರತ್ಯೇಕ ಬಸ್ ನಿಲ್ದಾಣ, ವರ್ಕ್‌ಶಾಪ್ ಹಾಗೂ ಡಿಪೋ ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಜಿಲ್ಲಾಡಳಿತದೊಂದಿಗೆ ಸಮಾಲೋಚನೆ ನಡೆಸಿ ಕಾಲಮಿತಿಯೊಳಗೆ ಪ್ರತ್ಯೇಕ ವ್ಯವಸ್ಥೆಗೆ ಯತ್ನಿಸಲಾಗುವುದು. ಪ್ರಸ್ತುತ ಖಾಸಗಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಮಹಾನಗರ ಪಾಲಿಕೆಗೆ ಸೇರಿದ ಖಾಲಿ ಜಾಗದಿಂದ ಸರಕಾರಿ ಸಿಟಿ ಬಸ್‌ಗಳು ಸಂಚಾರ ನಡೆಸಲಿವೆ ಎಂದು ಶಾಸಕ ಕೆ.ಬಿ. ಪ್ರಸನ್ನಕುಮಾರ್ ಹೇಳಿದ್ದಾರೆ.

ವಿದ್ಯಾರ್ಥಿಗಳಿಗೆ ಬಸ್ ಪಾಸ್:

ನಗರದಾದ್ಯಂತ ಆರಂಭಗೊಳ್ಳಲಿರುವ ಸರಕಾರಿ ಸಿಟಿ ಬಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿಯ ಬಸ್ ಪಾಸ್ ಸೌಲಭ್ಯ ಕಲ್ಪಿಸಲಾಗುವುದು. ವಿದ್ಯಾರ್ಥಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿ ಕೊಡುವ ಉದ್ದೇಶದಿಂದ ಬಸ್‌ಗಳು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸಂಚರಿಸಲು ಕ್ರಮಕೈಗೊಳ್ಳುವಂತೆ ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಸಲಹೆ ನೀಡಲಾಗುವುದು

                    <.ಕೆ.ಬಿ. ಪ್ರಸನ್ನಕುಮಾರ್

ಶಿವಮೊಗ್ಗ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News