ಶಿವಮೊಗ್ಗ ನಗರ ಸಂಚಾರ ವ್ಯವಸ್ಥೆ ಸುಧಾರಣೆಗೆ ಕ್ರಮ: ಎಸ್ಪಿ
ಶಿವಮೊಗ್ಗ, ಆ. 27: ಶಿವಮೊಗ್ಗ ನಗರ ಸಂಚಾರ ವ್ಯವಸ್ಥೆ ಸುಧಾರಣೆಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು. ಪ್ರಿಪೆಯ್ಡಿ ಆಟೊ ನಿಲ್ದಾಣಗಳ ಸ್ಥಾಪನೆಗೆ ಒತ್ತು ನೀಡಲಾ ಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಪ್ರೆಸ್ ಟ್ರಸ್ಟ್ ಸಂಸ್ಥೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಆಟೊಗಳಿಗೆ ಮೀಟರ್ ಕಡ್ಡಾಯ ಮಾಡಲಾಗಿದೆ. ಆದರೆ, ಸಮರ್ಪಕವಾಗಿ ಜಾರಿಯಾಗಿಲ್ಲ. ಮೀಟರ್ ಕಡ್ಡಾಯವಾಗಲೇಬೇಕು. ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಜಾರಿಗೊಳಿಸುವ ಎಲ್ಲಾ ಯೋಜನೆಗಳ ಫಲ ಜನರಿಗೆ ತಲುಪುವಂತಾಗಬೇಕು ಎಂದರು.
ಜಿಲ್ಲೆಯಲ್ಲಿ ಈಗಾಗಲೇ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಯಲ್ಲಿದ್ದು, ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲು ಶ್ರಮಿಸಲಾಗುವುದು. ಪೊಲೀಸರು ಜನರ ವಿಶ್ವಾಸಗಳಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದು ಅಭಿನವ್ ಖರೆ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಗಣಪತಿ ಹಬ್ಬ ಮುಂದಿನ ವಾರ ನಡೆಯಲಿದ್ದು, ಸೌಹಾರ್ದ ಗಣೇಶೋತ್ಸವ ಆಚರಣೆಗೆ ಜನತೆ ಸಹಕರಿಸಬೇಕು ಎಂದ ಅವರು, ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಗಳ ಹುದ್ದೆ ಖಾಲಿ ಇರುವ ಬಗ್ಗೆ ಮೇಲಧಿಕಾರಿಗಳೊಂದಿಗೆ ಚರ್ಚಿಸಿ, ಭರ್ತಿಗೆ ಕ್ರಮವಹಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಟ್ರಸ್ಟ್‌ನ ಪ್ರಮುಖರಾದ ಎನ್. ಮಂಜುನಾಥ್, ಶಿ.ವಿ. ಸಿದ್ದಪ್ಪ, ಶೃಂಗೇಶ್, ಗಿರೀಶ್ ಉಮ್ರಾಯ್, ಜೇಸುದಾಸ್, ಚಂದ್ರಶೇಖರ್ ಉಪಸ್ಥಿತರಿದ್ದರು.