ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಪೂಜಿತಾ ಹುಬ್ಬಳ್ಳಿಯಲ್ಲಿ ಪತ್ತೆ
ಹುಬ್ಬಳ್ಳಿ, ಆ.28: ನಾಪತ್ತೆಯಾಗಿದ್ದ ಬೆಂಗಳೂರು ರಾಜಾಜಿನಗರದ ನ್ಯಾಷನಲ್ ಪಬ್ಲಿಕ್ ಶಾಲೆಯ ಎಂಟನೆ ತರಗತಿ ವಿದ್ಯಾರ್ಥಿನಿ ಎಂ.ಕೆ ಪೂಜಿತಾ ಹುಬ್ಬಳ್ಳಿ ರೇಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದಾಳೆ. ಇದರೊಂದಿಗೆ ಆಕೆಯ ಹೆತ್ತವರು ನಿಟ್ಟುಸಿರು ಬಿಡುವಂತಾಗಿದೆ
13 ವರ್ಷದ ಬಾಲಕಿ ಪೂಜಿತಾ ಗಣಿತ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದರಿಂದ ಉತ್ತರ ಪತ್ರಿಕೆಗೆ ಪೋಷಕರಿಂದ ಸಹಿ ಹಾಕಿಸಿಕೊಂಡು ಬರುವಂತೆ ಶಿಕ್ಷಕರು ಹೇಳಿದ್ದರು. ಬಳಿಕ ಪೂಜಿತಾ ಕಾಣೆಯಾಗಿ ಹೆತ್ತವರಿಗೆ ಆತಂಕ ಉಂಟಾಗಿತ್ತು. ದೇವಯ್ಯ ಪಾರ್ಕ್‌ನಲ್ಲಿರುವ ಮನೆಯಿಂದ ಆ.24ರಂದು ಶಾಲೆಗೆ ಹೋಗಿದ್ದ ಪೂಜಿತಾ ಸಂಜೆಯಾದರೂ ಮನೆಗೆ ವಾಪಸಾಗದೆ ಇದ್ದಾಗ ಗಾಬರಿಗೊಂಡು ಹೆತ್ತವರು ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಆಕೆ ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದಾಳೆ
ಮುಂಬೈಗೆ ತೆರಳಿದ್ದಾಳೆ ಎಂಬ ಗುಮಾನಿ ಮೇರೆಗೆ ರೈಲನ್ನು ತಡೆದು ಪರಿಶೀಲಿಸುತ್ತಿದ್ದಾಗ ದಾದರ‍್ -ಹುಬ್ಬಳ್ಳಿ ರೈಲಿನಲ್ಲಿ ಪೂಜಿತಾ ಪತ್ತೆಯಾಗಿದ್ದಾಳೆ. ಪೊಲೀಸರು ಆಕೆಯನ್ನು ವಿಚಾರಿಸಿದ ಬಳಿಕ ಸಂಬಂಧಿಕರ ವಶಕ್ಕೆ ಆಕೆಯನ್ನು ಒಪ್ಪಿಸಿದ್ದಾರೆ.