ಚಿಕ್ಕಮಗಳೂರು: ಉಚಿತ ಆರೋಗ್ಯ ತಪಾಸಣಾ ಶಿಬಿರ

Update: 2016-08-28 16:53 GMT

ಚಿಕ್ಕಮಗಳೂರು, ಆ.28: ಸಫಾ ಬೈತುಲ್‌ಮಾಲ್ ಚಾರಿಟೇಬಲ್ ಟ್ರಸ್ಟ್‌ನಿಂದ ಟಿಪ್ಪು ನಗರದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಜಾತಿಬೇಧ ಮರೆತು ನೂರಾರು ಜನ ಪಾಲ್ಗೊಂಡಿದ್ದರು.

ಟಿಪ್ಪುನಗರದ ಬಿಲಾಲ್ ಮಸೀದಿ ಆವರಣದಲ್ಲಿ ಬೆಳಗ್ಗೆ 9:30ರಿಂದ ಸಂಜೆಯವರೆಗೂ ನಡೆದ ಶಿಬಿರದಲ್ಲಿ ಸಂತೆ ಮೈದಾನ, ಮಾರ್ಕೆಟ್ ರಸ್ತೆ, ಶಂಕರಪುರ ಸೇರಿದಂತೆ ವಿವಿಧ ಭಾಗಗಳಿಂದ ಮಕ್ಕಳಿಂದ ವೃದ್ಧ್ದರಾದಿಯಾಗಿ ನೂರಾರು ಜನ ಆಗಮಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಉಚಿತ ಔಷಧಿಗಳನ್ನು ಪಡೆದರು.

ಸಂಸ್ಥೆ ಅಧ್ಯಕ್ಷ ಇರ್ಷಾದ್ ಅಹ್ಮದ್ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಅದೆಷ್ಟೊ ಮಂದಿ ಬಡವರು ಹಲವು ಕಾಯಿಲೆಗಳಿಗೆ ತುತ್ತಾಗಿ ಚಿಕಿತ್ಸೆಗೂ ಹಣವಿಲ್ಲದೆ ಹಪಹಪಿಸುತ್ತಿದ್ದುದನ್ನು ಕಂಡಿದ್ದೇವೆ. ಅದನ್ನರಿತು ಕಳೆದ ಹಲವು ವರ್ಷಗಳಿಂದ ಸಫಾ ಬೈತುಲ್‌ಮಾಲ್ ಚಾರಿಟೇಬಲ್ ಟ್ರಸ್ಟ್‌ನಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರದ ಮೂಲಕ ಜಾತಿ, ಮತ ಭೇದ ಮರೆತು ಬಡವರ್ಗದ ಸರ್ವಧರ್ಮೀಯರಿಗೂ ತಪಾಸಣೆ ಮಾಡಿ ಉಚಿತವಾಗಿ ಔಷಧಿಗಳನ್ನು ನೀಡಿ ಸಹಕರಿಸಲಾಗುತ್ತಿದೆ. ಮೈಕೈ ನೋವು ಸೇರಿದಂತೆ ಸಣ್ಣಪುಟ್ಟ ಕಾಯಿಲೆಗಳನ್ನು ಗುಣಪಡಿಸಿಕೊಳ್ಳಲು ಕೈಲಾಗದಷ್ಟು ಕೆಲವು ಬಡವರಿದ್ದಾರೆ. ಆ ವರ್ಗದ ಜನಕ್ಕೆ ಈ ಶಿಬಿರ ಅನುಕೂಲವಾಗಿದೆ ಎಂದರು.

ನಗರದಲ್ಲಿ ಸಂಸ್ಥೆಯಿಂದ ಮನೆಗಳಿಗೆ ತೆರಳಿ ಅವರಲ್ಲಿರುವ ಸ್ಕ್ರಾಪ್ ಸಾಮಗ್ರಿಗಳನ್ನು ಪಡೆದು ಅದನ್ನು ಮಾರಿ ಬಂದ ಹಣದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ, ಬಡವರಿಗೆ ಆಹಾರಧಾನ್ಯ ವಿತರಣೆ, ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಗೆ ಕೈಲಾದ ಮಟ್ಟಿಗೆ ಧನಸಹಾಯ ಮಾಡಲಾಗುತ್ತಿದೆ ಎಂದರು.

ಉಚಿತ ತಪಾಸಣೆ ನಡೆಸುತ್ತಿರುವ ಕಡೂರು ಸರಕಾರಿ ಆಸ್ಪತ್ರೆಯ ವೈದ್ಯ ಡಾ.ಅರವಿಂದ್ ಮಾತನಾಡಿ, ಮೈಕೈ ನೋವು, ಜ್ವರ, ಕೆಮ್ಮು, ಶೀತ, ಬಿಪಿ, ಶುಗರ್ ಸೇರಿದಂತೆ ನಾನಾರೀತಿ ಕಾಯಿಲೆಗೊಳಪಟ್ಟವರು ಈ ಆರೋಗ್ಯ ತಪಾಸಣಾ ಶಿಬಿರಕ್ಕೆ ಬಂದು ಚಿಕಿತ್ಸೆ ಪಡೆಯುವ ಜೊತೆ ಔಷಧಿಗಳನ್ನು ಪಡೆದಿದ್ದಾರೆ.

ತೀವ್ರ ಸ್ವರೂಪದ ಕಾಯಿಲೆಗಳು ಇದ್ದಲ್ಲಿ ಸಂಬಂಧ ಪಟ್ಟ ವೈದ್ಯರ ಬಳಿತೆರಳಿ ಕಾಯಿಲೆ ಗುಣಪಡಿಸಿಕೊಳ್ಳಲು ಸಲಹೆ ನೀಡುತ್ತೇವೆ. ಇದರ ಜೊತೆಗೆ ಸಂಸ್ಥೆಯಿಂದ ಸಹಾಯ ಮಾಡುತ್ತೇವೆ. 150ರಿಂದ 200ರೋಗಿಗಳನ್ನು ತಪಾಸಣೆ ಮಾಡಲಾಗಿದ್ದು ಕೊಳಚೆ ಪ್ರದೇಶವಾಗಿರುವುದರಿಂದ ಚಿಕುನ್ ಗುನ್ಯಾ ಸಂಬಂಧಿ ಕಾಯಿಲೆಗಳ ರೋಗಿಗಳೆ ಹೆಚ್ಚು ಬಂದಿದ್ದಾರೆ ಎಂದರು.

ಸಂಸ್ಥೆಯ ನೂರುಲ್ಲಾ, ಸಾಹಿರ್ ಕುರೇಶಿ, ಮುದಸ್ಸೀರ್, ಶುಶ್ರೂಷಕಿ ನಫೀಸಾ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News