ಛಾಯಾಗ್ರಾಹಕರಿಗೆ ಶೀಘ್ರ ಆಶ್ರಯ ನಿವೇಶನ: ಸಚಿವ ಮಲ್ಲಿಕಾರ್ಜುನ್
ದಾವಣಗೆರೆ, ಆ. 28: ನಗರದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ವಸತಿ ಯೋಜನೆ ಕಲ್ಪಿಸುವ ಉದ್ದೇಶದಿಂದ ಸೂಕ್ತ ಜಮೀನಿಗಾಗಿ ಹುಡುಕಾಟ ನಡೆಸುತ್ತಿದ್ದು, ನಿರೀಕ್ಷಿತ ಜಮೀನು ದೊರೆತ ಕೂಡಲೇ ಎಲ್ಲರಿಗೂ ಆಶ್ರಯ ನಿವೇಶನಗಳನ್ನು ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಭರವಸೆ ನೀಡಿದ್ದಾರೆ.
ನಗರದ ರೇಣುಕಾಮಂದಿರದಲ್ಲಿ ರವಿವಾರ ಜಿಲ್ಲಾ ಫೋಟೊಗ್ರಾಫರ್ಸ್, ವೀಡಿಯೊಗ್ರಾಫರ್ಸ್ ಹಾಗೂ ತಾಲೂಕು ಫೋಟೊಗ್ರಾಫರ್ಸ್ ಯೂತ್ ವೆಲ್‌ಫೇರ್ ಅಸೋಸಿಯೇಶನ್ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆಶ್ರಯ ಮನೆಗಳನ್ನು ನೀಡುವ ಕಾರ್ಯವನ್ನು 2002ರಿಂದಲೇ ನಿಲ್ಲಿಸಲಾಗಿದೆ. ಅಂದಿನಿಂದ ಇಂದಿನವರೆಗೆ ಜನಸಂಖ್ಯೆ ಹೆಚ್ಚಿದ್ದು, ಭೂಮಿಯ ಬೆಲೆಯೂ ದುಪ್ಪಟ್ಟಾಗಿದೆ. ಹಾಗಾಗಿ, ಭೂಮಿ ಖರೀದಿಯಲ್ಲಿ ವಿಳಂಬವಾಗುತ್ತಿದೆ ಎಂದರು.
ಈಗಾಗಲೇ ಛಾಯಾಗ್ರಾಹಕರ ಕುಟುಂಬದ ಮಕ್ಕಳಿಗೆ ವಿಶೇಷ ಕೆಟಗರಿ ಅಡಿ ಸ್ಕಾಲರ್‌ಶಿಪ್ ನೀಡಲಾಗುತ್ತಿದೆ. ಛಾಯಾಗ್ರಾಹಕರಿಗೂ ಶೀಘ್ರವೇ ಉಚಿತ ನಿವೇಶನ ಕೊಡಿಸಲಾಗುವುದು ಎಂದು ಅವರು ತಿಳಿಸಿದರು.
ಇಂದಿನ ತಂತ್ರಜ್ಞಾನದ ಯುಗದಲ್ಲಿ ಛಾಯಾಗ್ರಾಹಕರು ಲಕ್ಷಾಂತರ ರೂ. ವ್ಯಯಿಸಿ ಕ್ಯಾಮರಾ ಖರೀದಿ ಮಾಡಿರುತ್ತಾರೆ. ಆದರೆ, ಅದಕ್ಕೆ ತಕ್ಕನಾದ ದುಡಿಮೆ ಆಗುತ್ತಿಲ್ಲ. ಅನೇಕ ವರ್ಷಗಳಿಂದ ಛಾಯಾಗ್ರಾಹಕರ ಆಗುಹೋಗುಗಳನ್ನು ಅರಿತಿದ್ದೇನೆ. ಆದ್ದರಿಂದ ಮುಂದಿನ ದಿನಗಳಲ್ಲಿ ಛಾಯಾಗ್ರಾಹಕರಿಗೆ ಎಲ್ಲಾ ರೀತಿಯ ನೆರವು ನೀಡಲು ರಾಜ್ಯ ಸರಕಾರ ಬದ್ಧವಾಗಿದೆ ಎಂದು ಹೇಳಿದರು.ಫೆಟೊಗ್ರಾಫರ್ಸ್ ಅಸೋಸಿಯೇಶನ್‌ನ ಜಿಲ್ಲಾ ಸಹಕಾರ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಒಂದು ಇಡೀ ಪುಸ್ತಕ ಓದಿ ತಿಳಿದುಕೊಳ್ಳಬೇಕಾದ್ದನ್ನು ಛಾಯಾಗ್ರಾಹಕ ಒಂದು ಚಿತ್ರದಲ್ಲಿ ಅದರ ಸಮಗ್ರ ವರದಿ ನೀಡಬಲ್ಲ. ಇರುವುದನ್ನು ಇರುವಂತೆ ಸತ್ಯ ಹೇಳುವ ಕಲೆಯೆಂದರೆ ಅದು ಛಾಯಾಚಿತ್ರವೊಂದೆ ಎಂದ ಅವರು, ಎಲ್ಲರ ನೆನಪುಗಳನ್ನು ಹಸಿರಾಗಿಡುವಂತೆ ಕೆಲಸ ಮಾಡುವ ಛಾಯಾಗ್ರಾಹಕರ ಬದುಕು ಹಸನಾಗಲಿ ಎಂದು ಹಾರೈಸಿದರು.
ಅಸೋಸಿಯೇಷನ್‌ನ ಜಿಲ್ಲಾ ಕಾರ್ಯದರ್ಶಿ ವಿಜಯ್ ಜಾಧವ್ ಪ್ರಾಸ್ತಾವಿಕ ಮಾತನಾಡಿದರು. ಇದೇ ವೇಳೆ ಹಿರಿಯ ಛಾಯಾಗ್ರಾಹಕ ಬಾಬಣ್ಣ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಜಿಲ್ಲಾ ಫೋಟೊಗ್ರಾಫರ್ಸ್ ಮತ್ತು ವೀಡಿಯೊಗ್ರಾಫರ್ಸ್ ಸಂಘದ ಜಿಲ್ಲಾಧ್ಯಕ್ಷ ಶಿಕಾರಿ ಶಂಭು, ವರ್ತಕ ದೇವರಮನೆ ಶಿವಕುಮಾರ್, ವಿವಿಧೋದ್ದೇಶ ಸಂಘದ ಜಿಲ್ಲಾಧ್ಯಕ್ಷ ಆರ್.ಎನ್. ಪಾಟೀಲ್, ದೇವರಾಜ್, ಅಂಬಾಸ್, ಶಿವಣ್ಣ, ಸತೀಶ್ ಪವಾರ್, ಶಿವಲಿಂಗಪ್ಪ, ರಾಮಚಂದ್ರ, ತಿಪ್ಪೇಸ್ವಾಮಿ ಮತ್ತಿತರರಿದ್ದರು.