×
Ad

ನಗರಸಭೆ ವಿರುದ್ಧ ಸಾರ್ವಜನಿಕರ ಅಸಮಾಧಾನ

Update: 2016-08-28 22:29 IST

ಮಡಿಕೇರಿ, ಆ.28 : ನಗರಸಭೆಯ ಆಡಳಿತ ವೈಖರಿ ಒಂದು ರೀತಿಯಲ್ಲಿ ಮ್ಯಾಚ್ ಫಿಕ್ಸಿಂಗ್ ತರ ತೋರುತ್ತಿದೆ. ಯಾಕೆಂದರೆ ಆಡಳಿತ ಪಕ್ಷಕ್ಕೆ ಅಭಿವೃದ್ಧಿ ಬಗ್ಗೆ ಹೇಗೆ ನೈಜ ಕಾಳಜಿ ಇಲ್ಲವೋ ಅದೇ ರೀತಿಯ ಅಸಡ್ಡೆ ವಿರೋಧ ಪಕ್ಷದಲ್ಲೂ ಇದೆ ಎಂದು ಪಟ್ಟಣದ ಸಾರ್ವಜನಿಕರು ಮಾತಾಡಿಕೊಳ್ಳುತ್ತಿದ್ದಾರೆ.

ಪ್ರತೀ ವರ್ಷ ಮೂರು ತಿಂಗಳಿಗೊಂದು ರಸ್ತೆ, ಚರಂಡಿ ನಿರ್ಮಿಸುವ ಅಜೆಂಡಾ ನಗರಸಭೆಯಲ್ಲಿದೆ. ಸಾರ್ವಜನಿಕರ ಹಣ ಕೇವಲ ರಸ್ತೆ, ಚರಂಡಿ ನಿರ್ಮಾಣಕ್ಕಾಗಿ ಪೋಲು ಮಾಡಿ ಇದನ್ನೇ ಅಭಿವೃದ್ಧಿ ಎಂದು ಪ್ರತಿಬಿಂಬಿಸುತ್ತಿರುವ ನಗರಸಭಾ ಸದಸ್ಯರು ತಮ್ಮ ತಮ್ಮ ವಾರ್ಡ್‌ಗಳ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸದೆ, ಅಲ್ಲೊಂದು ಇಲ್ಲೊಂದು ಸಭೆಗಳಲ್ಲಿ ಏರಿದ ಧ್ವನಿ ಬಳಸಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಅರ್ಥವಿಲ್ಲದ ನಿರ್ಣಯಗಳಿಂದ ಮಡಿಕೇರಿ ನಗರಕ್ಕೆ ಅಥವಾ ನಗರದ ಜನತೆಗೆ ಯಾವುದೇ ರೀತಿಯ ಲಾಭವೂ ಆಗಿಲ್ಲ ಎಂದು ಆರೋಪಿಸುತ್ತಾರೆ.

ಬ್ರಿಟಿಷರ ಕಾಲದ ನೂರು ವರ್ಷಗಳ ಕಾಲದ ಸೇತುವೆ, ಕಟ್ಟಡಗಳು ಇಂದಿಗೂ ಜೀವಂತವಾಗಿದ್ದರೂ ನಗರಸಭೆ ನಿರ್ಮಿಸುವ ರಸ್ತೆ ಕೇವಲ ಮೂರು ತಿಂಗಳು ಕೂಡ ಉಳಿಯುತ್ತಿಲ್ಲ. ದಸರಾ ಬಂತೆಂದ್ದರೇ ತೇಪೆ ಹಾಕುವ ನಗರಸಭೆ, ಕಾಂಕ್ರಿಟ್ ರಸ್ತೆಗಳ ಮೂಲಕವೂ ಕಳಪೆ ಕಾಮಗಾರಿಯಿಂದ ಜನರ ಸಹನೆಯನ್ನು ಪರೀಕ್ಷಿಸಿದೆ. ಕಳಪೆ ಕಾಮಗಾರಿಯಲ್ಲಿ ಮಡಿಕೇರಿ ನಗರಸಭೆ ಇಡೀ ರಾಜ್ಯಕ್ಕೇ ಮಾದರಿಯಾದಂತಿದೆ ಎಂದು ಆರೋಪಿಸುತ್ತಾರೆ.

ನಗರದ ಹೃದಯ ಭಾಗ ಇಂದಿರಾ ಗಾಂಧಿ ವೃತ್ತದಲ್ಲಿ ದೊಡ್ಡ ದೊಡ್ಡ ಹೊಂಡ ಗುಂಡಿಗಳಾಗಿದ್ದರೂ ಇದರ ಬಗ್ಗೆ ನಗರಸಭೆ ನಿರ್ಲಕ್ಷ್ಯ ವಹಿಸಿದೆ. ಆಯಾ ವಾರ್ಡ್‌ನ ನಿವಾಸಿಗಳು ಸಮಸ್ಯೆ ಇದೆ ಬನ್ನಿ ಎಂದು ಗೋಗರೆದರೂ ಸದಸ್ಯರು ಸ್ಥಳಕ್ಕೆ ಆಗಮಿಸುವುದಿಲ್ಲ ಎನ್ನುತ್ತಾರೆ ಸ್ಥಳೀಯರು.

ಓಂಕಾರೇಶ್ವರ ದೇವಾಲಯದ ಹಿಂಭಾಗದ ರಸ್ತೆ ಕಳಪೆ ಕಾಮಗಾರಿಯಿಂದ ಹದಗೆಟ್ಟು ಎಷ್ಟೋ ತಿಂಗಳುಗಳೇ ಕಳೆದಿದೆ. ಗುಂಡಿಗಳಾಗಿರುವ ಈ ರಸ್ತೆಯಲ್ಲಿ ದ್ವಿಚಕ್ರ ವಾಹನ ಚಾಲಕರು ಹಾಗೂ ವಯೋವೃದ್ಧರು ನಿಯಂತ್ರಣ ತಪ್ಪಿ ಬಿದ್ದಿದ್ದಾರೆ. ಆಟೋ ಚಾಲಕರಂತೂ ಈ ರಸ್ತೆಯಲ್ಲಿ ಸಾಕಷ್ಟು ಕಷ್ಟ ನಷ್ಟಗಳನ್ನು ಅನುಭವಿಸುತ್ತಿದ್ದಾರೆ. ಮಾತ್ರವಲ್ಲ, ಈ ರಸ್ತೆಯಲ್ಲಿ ಬರುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಕೊಡವ ಸಮಾಜದಲ್ಲಿ ಮದುವೆಗಳಿದ್ದಾಗ ವಾಹನದಟ್ಟಣೆಯಿಂದ ಹೊಂಡ ಗುಂಡಿಗಳ ಈ ರಸ್ತೆಯಲ್ಲಿ ಅಪಾಯದ ಪರಿಸ್ಥಿತಿಯೂ ಎದುರಾಗಿದೆ.

ಮನವಿ ಮಾಡಿದರೂ ಕನಿಷ್ಠ ರಸ್ತೆಯ ಗುಂಡಿಯನ್ನು ಮುಚ್ಚಲಾಗದ ನಗರಸಭೆ ಮತ್ತು ನಗರಸಭಾ ಸದಸ್ಯರ ವಿರುದ್ಧ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಣೇಶ ಚತುರ್ಥಿ ಹಾಗೂ ದಸರಾ ಹಬ್ಬ ಸಮೀಪಿಸುತ್ತಿದ್ದು, ಹದಗೆಟ್ಟ ರಸ್ತೆಯಲ್ಲೇ ಹಬ್ಬದ ಮಂಟಪಗಳು ಸಾಗಬೇಕಾಗಿದೆ. ನಗರದಲ್ಲಿ ಸುಮಾರು 50 ಕ್ಕೂ ಹೆಚ್ಚಿನ ಗಣೇಶ ಚತುರ್ಥಿಯ ಸಮಿತಿಗಳು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುತ್ತಿದ್ದು, ರಸ್ತೆಗಳ ಅವ್ಯವಸ್ಥೆಯ ಬಗ್ಗೆ ಸಮಿತಿ ಪ್ರಮುಖರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರತಿದಿನ ಆಗಮಿಸುತ್ತಿರುವ ಸಾವಿರಾರು ಪ್ರವಾಸಿಗರು ಕೂಡ ನಗರದ ರಸ್ತೆಗಳ ಅವ್ಯವಸ್ಥೆಯ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ನಗರಸಭೆಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡುವೆ ಹೊಂದಾಣಿಕೆಯ ಕೊರತೆ ಎದುರಾಗಿದ್ದು, ಸಾರ್ವಜನಿಕರು ಇದರ ಪರಿಣಾಮವನ್ನು ಎದುರಿಸಬೇಕಾಗಿದೆ ಎಂದು ಪತ್ರಿಕೆಗೆ ಅಳಲು ತೊಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News