×
Ad

ಛಾಪಾ ಕಾಗದ: ಮುಖಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಾಟ

Update: 2016-08-28 22:30 IST

 ಕಾರವಾರ, ಆ.28: ರಾಜ್ಯದಲ್ಲಿ ಛಾಪಾ ಕಾಗದಕ್ಕೆ ಮುಖ ಬೆಲೆಗಿಂತ ಹೆಚ್ಚಿನ ದರ ತೆಗೆದುಕೊಂಡು ಸುಲಿಗೆ ಮಾಡಲಾಗುತ್ತಿದೆ. ಇದರಿಂದ ಜನರಿಗೆ ಆಗುವ ತೊಂದರೆಯನ್ನು ಸರಿಪಡಿಸಬೇಕು ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯದ ಗಡಿ ರಾಜ್ಯಗಳಲ್ಲಿ ಛಾಪಾ ಕಾಗದಗಳನ್ನು ಮುಖಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಮುಖಬೆಲೆಗಿಂತಲೂ ಅಧಿಕ ಹಣ ವಸೂಲಿ ಮಾಡುತ್ತಿರುವುದರಿಂದ ಜನರಿಗೆ ಅನ್ಯಾಯ ಮಾಡಲಾಗುತ್ತಿದೆ. ಅನಾವಶ್ಯಕವಾಗಿ ಸಾರ್ವಜನಿಕರ ಹಣ ಪೋಲಾಗುತ್ತಿದೆ ಎಂದು ಆರೋಪಿಸಿದರು. ಈ ಬಗ್ಗೆ ಸಾಕಷ್ಟು ಬಾರಿ ಸರಕಾರದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ರಾಜ್ಯದಲ್ಲಿ ಒಂದು ದಶಕಗಳಿಗಿಂತಲೂ ಹೆಚ್ಚು ಅವಧಿಯಿಂದ ಛಾಪಾ ಕಾಗದ ಖರೀದಿ ಮಾಡಬೇಕಾದರೆ ಸಾರ್ವಜನಿಕರು ಪರದಾಡಬೇಕಾದ ಸ್ಥಿತಿ ಇತ್ತು. ರಾಜ್ಯದಲ್ಲಿ ಸರಕಾರವೂ ಮುದ್ರಿತ ಸ್ಟ್ಯಾಂಪ್ ಕಾಗದ ಬಳಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದು, ಇ- ಸ್ಟ್ಯಾಂಪನ್ನು ಮಾರಾಟ ಮಾಡುತ್ತಿದೆ. ಅದು ಸಹ ಸಹಕಾರಿ ಸಂಘಗಳ ಮುಖಾಂತರ ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾ ವತಿಯಿಂದ ಜನರು ಇ ಸ್ಟ್ಯಾಂಪಿಂಗ್ ಪಡೆಯಬೇಕಾಗಿದೆ. ಇ - ಸ್ಟ್ಯಾಂಪ್‌ಗಳನ್ನು ಮುಖ ಬೆಲೆಗಿಂತ ಹೆಚ್ಚಿನ ಹಣ ನೀಡಿ ಖರೀದಿಸಬೇಕಾಗಿದೆ. ಸಂಜೆ 4ರ ನಂತರ, ರಜೆಯ ಅವಧಿಯಲ್ಲಿ ಲಭಿಸುವುದಿಲ್ಲ. ಆವಶ್ಯಕತೆ ಇದ್ದವರು ತೊಂದರೆ ಪಡುವಂತಾಗಿದೆ. ಹೀಗಾಗಿ ತಾವು ಮಧ್ಯಸ್ಥಿಕೆ ವಹಿಸಿ ಸಮಸ್ಯೆಯನ್ನು ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 920,31,65,871 ರೂ. ಛಾಪಾ ಕಾಗದ ಖಜಾನೆ ಇಲಾಖೆಯಲ್ಲಿ ಕೊಳೆಯುತ್ತಿದ್ದು, ಅದನ್ನು ಕಾವಲು ಕಾಯಲು ದಿನದ 24 ತಾಸು ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಇದು ಸರಕಾರದ ಬೊಕ್ಕಸಕ್ಕೆ ನಷ್ಟ ಎಂದು ಹೇಳಿದರು. ನೆರೆರಾಜ್ಯಗಳಾದ ಗೋವಾ, ಮಹಾರಾಷ್ಟ್ರ, ತಮಿಳುನಾಡು, ಕೇರಳ ಇನ್ನಿತರ ಗಡಿ ರಾಜ್ಯಗಳಲ್ಲಿ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆ ಪಡೆಯಲಾಗುವುದಿಲ್ಲ. ಇದಲ್ಲದೇ ಗುಣಮಟ್ಟದ ಛಾಪಾ ಕಾಗದ ವಿತರಣೆಯಾಗುತ್ತದೆ. ನೂರಾರು ವರ್ಷದ ದಾಖಲೆಗಳನ್ನು ಇದರಲ್ಲಿ ಜೋಪಾನ ಮಾಡಬಹುದಾಗಿದೆ. ಇಲ್ಲಿಯೂ ಅದೇ ಪದ್ಧತಿ ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಇ -ಸ್ಟ್ಯಾಂಪಿಂಗ್ ಪದ್ಧತಿಯನ್ನು ರದ್ದು ಪಡಿಸಿ ಈ ಹಿಂದಿನ ದೀರ್ಘಕಾಲ ಬಾಳಿಕೆ ಬರುವ ಸರಕಾರದಿಂದ ಮುದ್ರವಾಗುವ ಛಾಪಾ ಕಾಗದವನ್ನು ಪುನಃ ಸ್ಟ್ಯಾಂಪ್ ವೆಂಡರ್ ಮೂಲಕ ಜಾರಿಗೆ ತಂದು ಸಾರ್ವಜನಿಕರಿಗೆ ಅನುಕೂಲ ಮಾಡುವಂಥ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ. ಮನವಿ ಸ್ವೀಕರಿಸಿದ ಸಚಿವ ಕಾಗೋಡು ತಿಮ್ಮಪ್ಪಈ ವಿಷಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News