ಕೃಷಿ ಪತ್ತಿನ ಸಹಕಾರ ಸಂಘಕ್ಕೆ 90.36 ಲಕ್ಷ ನಿವ್ವಳ ಲಾಭ
ಕುಶಾಲನಗರ, ಆ. 28: ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ವತಿಯಿಂದ 2015-16ನೆ ಸಾಲಿನ ವಾರ್ಷಿಕ ಮಹಾಸಭೆಯನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಭೆಯಲ್ಲಿ ಸಂಘದ ಅಧ್ಯಕ್ಷ ಟಿ.ಆರ್ ಶರವಣ ಕುಮಾರ್ ಮಾತನಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.90.36ಲಕ್ಷ ರೂ. ನಿವ್ವಳ ಲಾಭದಲ್ಲಿದ್ದು, ಕುಶಾಲನಗರದ ತ್ಯಾಗರಾಜ ರಸ್ತೆಯ ಪಕ್ಕದಲ್ಲಿ ನೂತನವಾಗಿ ಕಟ್ಟಡ ನಿರ್ಮಿಸಲಾಗುವುದೆಂದು ತಿಳಿಸಿದರು. ಸಂಘ 2469 ಸದಸ್ಯರನ್ನು ಹೊಂದಿದ್ದು, 2015-16ನೆ ಸಾಲಿನಲ್ಲಿ 206.78 ಕೋಟಿ ರೂ. ವಾರ್ಷಿಕ ವ್ಯವಹಾರ ನಡೆದಿದೆ. ಸದಸ್ಯರಿಗೆ ಹೊಸದಾಗಿ ಹೈನುಗಾರಿಕೆ ಸಾಲ ನೀಡುತ್ತಿದ್ದೇವೆ. ಗ್ರಾಮೀಣ ಪ್ರದೇಶದ ಸದಸ್ಯರಿಗೆ ಕೃಷಿ ಚಟುವಟಿಕೆಗೆ ಸಾಲ ನೀಡುವುದರೊಂದಿಗೆ ಜಾಮೀನು ಸಾಲದ ಮಿತಿ 75 ಸಾವಿರದಿಂದ 1.50 ಲಕ್ಷಕ್ಕೆ ಹಾಗೂ ಮಧ್ಯಮಾವಧಿ ಸಾಲದ ಮಿತಿಯನ್ನು 3 ಲಕ್ಷದಿಂದ 5ಲಕ್ಷಕ್ಕೆ ಹೆಚ್ಚಿಸಿರುತ್ತೇವೆಂದರು. ಈ ವರ್ಷ 1767 ಸದಸ್ಯರು ಯಶಸ್ವಿನಿ ಆರೋಗ್ಯ ವಿಮೆಗೆ ನೋಂದಾಯಿಸಲಾಗಿದ್ದು, ಸಂಘ ಪ.ಜಾತಿ ಮತ್ತು ಪ.ಪಂಗಡದ ಸದಸ್ಯರಿಗೆ ಈ ಯೋಜನೆಯ ಪೂರ್ತಿ ಹಣವನ್ನು 2 ವರ್ಷದಿಂದಲೂ ಭರಿಸುತ್ತಿದೆ ಎಂದು ಮಹಾಸಭೆಗೆ ತಿಳಿಸಿದರು.
ವೇದಿಕೆಯಲ್ಲಿ ಉಪಾಧ್ಯಕ ಪಿ.ಕಾರ್ತೀಶನ್, ನಿರ್ದೇಶಕ ಎಚ್.ಎನ್ ರಾಮಚಂದ್ರ, ಪಿ.ಬಿ ಯತೀಶ್, ಕೆ.ಎನ್ ಅಶೋಕ್, ವಿ.ಎಸ್ ಆನಂದಕುಮಾರ್, ಎಮ್.ಕೆ ಗಣೇಶ್, ಬಿ.ಎ ಅಬ್ದುಲ್ ಖಾದರ್, ಸಿ.ಎಂ ಗಣಿಪ್ರಸಾದ್, ಕೆ.ವಿ ನೇತ್ರಾವತಿ, ಪಿ.ಎಂ.ಕವಿತ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ ಲೋಕೇಶ್, ಸಂಘದ ಲೆಕ್ಕಪರಿಶೋಧಕ ಚಂದ್ರಶೇಖರ್, ಲೆಕ್ಕಿಗ ವಿಜಯಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು