ಉ.ಕ.ದ ಮೂವರು ಸಂತ್ರಸ್ತರು ತಾಯ್ನಡಿಗೆ
ಕಾರವಾರ, ಆ. 28: ತೈಲ ಬೆಲೆಯಲ್ಲಿ ಇಳಿಕೆ ಉಂಟಾದ ಪರಿಣಾಮ ಸೌದಿ ಅರೇಬಿಯದ ಜಿದ್ದಾದಲ್ಲಿ ನೆಲೆಸಿದ್ದ ಉತ್ತರ ಕನ್ನಡ ಮೂಲದ ಮೂವರು ಸುಮಾರು ಎಂಟು ತಿಂಗಳುಗಳಿಂದ ವೇತನ ಇಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದು, ಕೇಂದ್ರ ಸರಕಾರದ ಸಹಕಾರದೊಂದಿಗೆ ಶನಿವಾರ ತಾಯ್ನಿಡಿಗೆ ಮರಳಿದ್ದಾರೆ.
ಕಾರವಾರದ ಸದಾಶಿವಗಡದ ರಿಝ್ವನ್ ಉಸ್ಮಾನ್ ಶೇಖ್, ಕುಮಟಾದ ಮಕ್ಬೂಲ್ ಅಬ್ದುಲ್ ಕರಿಮ್ ಹಾಗೂ ಶಿರಸಿಯ ಇಮ್ರಾನ್ ಖಾಝಿ ಸುರಕ್ಷಿತರಾಗಿ ತಾಯ್ನಿಡು ತಲುಪಿದವರು.
ಮೂವರಲ್ಲಿ ರಿಝ್ವನ್ ಹಾಗೂ ಮಕ್ಬೂಲ್ ಶುಕ್ರವಾರ ಮುಬೈಗೆ ತಲುಪಿದ್ದರು. ಮತ್ತು ಇಮ್ರಾನ್ ಶನಿವಾರ ಸೌದಿ ಅರೇಬಿಯದಿಂದ ಮುಂಬೈಗೆ ತಲುಪಿ ರವಿವಾರ ಕಾರವಾರಕ್ಕೆ ತಲುಪಿದ್ದಾರೆ. ಸೌದಿ ಅರೇಬಿಯಾದಲ್ಲಿ ತಾವು ಅನುಭವಿಸಿದ ನರಕ ಯಾತನೆಯನ್ನು ಬಿಚ್ಚಿಟ್ಟ ರಿಝ್ವಿನ್ ತಾನು ಸೌದಿ ಅರೆಬಿಯದ ಜಿದ್ದಾದಲ್ಲಿರುವ ‘ಸೌದಿ ಓಗೇರ್’ ಎನ್ನುವ ತೈಲ ಕಂಪೆನಿಯೊಂದರಲ್ಲಿ ಕಳೆದ ಐದು ವರ್ಷಗಳಿಂದ ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದೆ. ಕಳೆದ ಡಿಸೆಂಬರ್ ವರೆಗೆ ಅಲ್ಲಿನ ಪರಿಸ್ಥಿತಿ ಚೆನ್ನಾಗಿತ್ತು. ಅಲ್ಲಿನ ಆರ್ಥಿಕ ಬಿಕ್ಕಟ್ಟಿನಿಂದ ತೈಲ ಬೆಲೆಯಲ್ಲಿ ಭಾರೀ ಇಳಿಕೆಯಾದ ಕಾರಣ ಕಂಪೆನಿ ತಮ್ಮ 9 ತಿಂಗಳಿಂದ ವೇತನ ನೀಡದೆ ತಡೆ ಹಿಡಿದಿತ್ತು. ನಾವು ವೇತನಕ್ಕಾಗಿ ಒತ್ತಾಯಿಸಿದಾಗ ಮೊದಲು ಕುಂಟು ನೆಪಗಳನ್ನು ಹೇಳಿ ತಪ್ಪಿಸಿ ಕೊಳ್ಳುತ್ತಿದ್ದ ಕಂಪೆನಿಯ ಅಧಿಕಾರಿಗಳು, ಸೌದಿ ಸರಕಾರದಿಂದ ನಮಗೆ ಬರಬೇಕಾದ ಭಾರೀ ಮೊತ್ತದ ಬಿಲ್ ಬಾಕಿ ಇರುವ ಕಾರಣ ವೇತನ ತಡೆ ಹಿಡಿಯಲಾಗಿದೆ ಎಂದು ಸಬೂಬು ಹೇಳಿ, ವೇತನ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ‘‘ನಾನು ವಾಸಿಸುತ್ತಿದ್ದ ಬಾಡಿಗೆ ಕೋಣೆಯಲ್ಲಿ ನನ್ನ ಜೊತೆಗೆ ರಾಜಸ್ಥಾನ ಹಾಗೂ ಬಿಹಾರದ ಇಬ್ಬರು ವಾಸಿಸುತ್ತಿದ್ದರು. ಕೆಲ ದಿನಗಳು ಕಳೆಯುತ್ತಿದ್ದಂತೆ ನಮಗೆ ಊಟ ಪೂರೈಸುತ್ತಿದ್ದ ಕಂಪೆನಿಯು ಆಹಾರ ಪೂರೈಕೆಯನ್ನೂ ನಿಲ್ಲಿಸಿತು. ನಾವು ಕೆಲಸ ಮಾಡುತ್ತಿದ್ದ ಕಂಪೆನಿ ಆಹಾರ ಪೂರೈಕೆ ಮಾಡುವ ಸಂಸ್ಥೆಗೆ ಊಟದ ಹಣ ನೀಡದ ಕಾರಣ ಆಹಾರ ಪೂರೈಕೆ ನಿಲ್ಲಿಸಿರುವುದಾಗಿ ಆಹಾರ ಪೂರೈಕೆಯ ಸಂಸ್ಥೆ ಹೇಳಿತು. ಬಳಿಕ ಊಟ ಇಲ್ಲದೆ ಕಂಗಾಲದ ನಾವು ಪರಿಪರಿಯಾಗಿ ಬೇಡಿಕೊಂಡ ಬಳಿಕ, ಊಟ ಪೂರೈಸುತ್ತಿದ್ದ ಸಂಸ್ಥೆ ದಿನಕ್ಕೆ ಕೇವಲ ಒಂದು ಹೊತ್ತಿನ ಊಟ ನೀಡುವುದಾಗಿ ಶರತ್ತಿನೊಂದಿಗೆ ಆಹಾರವನ್ನು ಪೂರೈಸುತ್ತಿತ್ತಾದರೂ ಬೆಳಗಿನ ಉಪಹಾರ ಮತ್ತು ರಾತ್ರಿಯ ಊಟ ಲಭಿಸುತ್ತಿರಲ್ಲಿಲ್ಲ ಮಧ್ಯಾಹ್ನದ ವೇಳೆ ನೀಡಲಾಗುತ್ತಿದ್ದ ಆಹಾರವನ್ನೇ ಸಂಜೆಯ ವೇಳೆ ತಿಂದು ಮರು ದಿನದವರೆಗೆ ಉಪವಾಸವಿರಬೇಕಾಗಿತ್ತು ಎಂದು ರಿಝ್ವಿನ್ ಗದ್ಗದಿತರಾಗಿ ನುಡಿದರು.
ನಮ್ಮ ಕಂಪೆನಿಯ ನೌಕರರಿಗೆ ವೈದ್ಯಕೀಯ ಸೌಲಭ್ಯಗಳನ್ನು ಹೊರ ಗುತ್ತಿಗೆಯಲ್ಲಿ ಪೂರೈಸುತ್ತಿದ್ದ ಇನ್ನೊಂದು ವೈದ್ಯಕೀಯ ಸಂಸ್ಥೆ ಔಷಧ ಪೂರೈಕೆ ನಿಲ್ಲಿಸಿದ್ದರಿಂದ ನಮ್ಮ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಅನಾರೋಗ್ಯ ಕಾಣಿಸಿಕೊಂಡಾಗ ಔಷಧಗಳನ್ನು ನೀಡಲು ವೈದ್ಯಕೀಯ ಸಂಸ್ಥೆ ನಿರಾಕರಿಸಿತು. ಕಂಪೆನಿ ವಿದ್ಯುತ್ ಬಿಲ್‌ಪಾವತಿಸದ ಹಿನ್ನೆಲೆಯಲ್ಲಿ ನಮ್ಮ ರೂಮ್‌ಗಳಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಮರಳು ಗಾಡಿನ 49 ಡಿಗ್ರಿ ಉಷ್ಣತೆಯಲ್ಲಿ ಜೀವನ ನಿರ್ವಹಣೆ ಅಸಾಧ್ಯದ ಮಾತಾಗಿತ್ತು. ಕಳೆದ ತಿಂಗಳು ಆರು ತಿಂಗಳಿಂದ ನಮ್ಮನ್ನು ಭೇಟಿಯಾಗದ ಕಂಪೆನಿ ಅಧಿಕಾರಿಗಳು, ಭಾರತದ ವಿದೇಶಾಂಗ ಸಚಿವ ವಿ. ಕೆ. ಸಿಂಗ್ ನಮ್ಮನ್ನು ಭೇಟಿಯಾಗಲು ಸೌದಿಗೆ ಆಗಮಿಸಿದ್ದ ವೇಳೆ ಅಲ್ಲಿನ ಅಧಿಕಾರಿಗಳು ಹಾಜರಾಗಿದ್ದರು.