×
Ad

'ಸರಕಾರಿ ನಿಯೋಜಿತ ಕಾರ್ಯಗಳಿಗೆ ಬಳಕೆ'

Update: 2016-08-28 22:34 IST

 ವೀರಾಜಪೇಟೆ: ಅ.28: ಕೊಡಗಿನಲ್ಲಿರುವ ಸಾವಿರಾರು ಎಕ್ರೆ ಸರಕಾರಿ ಜಮೀನುಗಳನ್ನು ನಾಗರಿಕರು ಒತ್ತುವರಿ ಮಾಡಿಕೊಂಡಿದ್ದು, ಅಂತಹ ಜಮೀನುಗಳನ್ನು ಶೀಘ್ರ ಸರ್ವೇ ನಡೆಸಿ ಸರಕಾರಿ ನಿಯೋಜಿತ ಕಾರ್ಯಕ್ರಮಗಳಿಗೆ ಬಳಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ವಿನ್ಸೆಂಟ್ ಡಿಸೋಜ ಹೇಳಿದ್ದಾರೆ. ವೀರಾಜಪೆೀಟೆ ಕಂದಾಯ ಇಲಾಖೆಯ ಕಚೇರಿಯಲ್ಲಿ ವೀರಾಜಪೇಟೆ ಹೋಬಳಿ ಮಟ್ಟದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಸರಕಾರಿ ಜಮೀನು ಒತ್ತುವರಿ ಮಾಡಿಕೊಳ್ಳುವುದು ಕಾನೂನಿಗೆ ವಿರುದ್ಧವಾಗಿದೆ. ಕಸ ವಿಲೇವಾರಿ ಮಾಡಲು ಸೂಕ್ತ ಸ್ಥಳದ ಕೊರತೆ, ಸಾರ್ವಜನಿಕರಿಗಾಗಿ ಬಳಸಲ್ಪಡುವ ಸ್ಮಶಾನ, ನಿರ್ಗತಿಕರಿಗೆ ನಿವೇಶನ, ಸರಕಾರಿ ಕಟ್ಟಡ ನಿರ್ಮಾಣಕ್ಕೆ ನಿವೇಶನ, ಅಂಗನವಾಡಿ ಕಟ್ಟಡ ಮುಂತಾದವುಗಳಿಗೆ ಸೂಕ್ತವಾದ ಸ್ಥಳಗಳಿಲ್ಲದೆ ಪರಿತಪಿಸುವ ಸ್ಥಿತಿ ಎದುರಾಗಿದೆ ಎಂದರು.
ಹಂತ ಹಂತವಾಗಿ ಒತ್ತುವರಿ ಮಾಡಿಕೊಂಡಿರುವ ಸರಕಾರಿ ಜಮೀನುಗಳನ್ನು ಸರ್ವೇ ನಡೆಸಿ ಸರಕಾರದ ಸ್ವಾಧೀನಕ್ಕೆ ತಂದು ಸಮಾಜ ಮುಖಿ ಕಾರ್ಯಗಳಿಗೆ ಬಳಸಿಕೊಳ್ಳಲಾಗುವುದು. ಸಾರ್ವಜನಿಕರು ಸಹಕರಿಸಬೇಕು ಎಂದರು.


ತಾಲೂಕು ಪಂಚಾಯತ್ ಸದಸ್ಯ ಪ್ರಶಾಂತ್ ಉತ್ತಪ್ಪಮಾತನಾಡಿ, ನೆರೆಯ ಕೇರಳ ರಾಜ್ಯದಿಂದ ಕರ್ನಾಟಕ ರಾಜ್ಯದ ಗಡಿ ಪ್ರದೇಶವಾದ ಮಾಕುಟ್ಟ್ಟದಲ್ಲಿ ತಪಾಸಣಾ ಕೇಂದ್ರವಿದ್ದರೂ ದಿನಂ ಪ್ರತಿ ನೂರಾರು ವಾಹನಗಳು ಅಕ್ರಮವಾಗಿ ಗಣಿ ಸಾಮಗ್ರಿಗಳನ್ನು ಹೊತ್ತು ಕೊಡಗು ಜಿಲ್ಲೆಗೆ ಅಗಮಿಸುತ್ತಿವೆ. ಇದರಲ್ಲಿ ವಾಹನದ ಸಾಮರ್ಥ್ಯಕ್ಕಿಂತ ಹೆಚ್ಚು ಸರಕುಗಳನ್ನು ತುಂಬಿಕೊಂಡು ಬರಲಾಗುತ್ತಿದ್ದು, ರಸ್ತೆಗಳು ಹಾಳಾಗುತ್ತಿವೆ ಎಂದು ದೂರಿದರು. ಮಾತನಾಡುತ್ತಾ ವೀರಾಜಪೇಟೆ ಹೋಬಳಿ ಯಲ್ಲಿ ನಿರಂತರ ಕಾಡಾನೆಗಳ ದಾಳಿಯಿಂದ ರ್ಯೆತರು ಕಂಗಲಾಗಿದ್ದಾರೆ. ಅರಣ್ಯ ಪ್ರದೇಶದ ಅಂಚಿನಲ್ಲಿರುವ ಆನೆ ಕಂದಕಗಳನ್ನು ಅಗಲೀಕರಿಸಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಜಿಲ್ಲಾಧಿಕಾರಿಯನ್ನು ಆಗ್ರಹಿಸಿದರು. ಇದಕ್ಕೆ ಉ್ತತರಿಸಿದ ಜಿಲ್ಲಾಧಿಕಾರಿಯವರು, ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕ್ಯೆಗೊಳ್ಳಲಾಗುವುದು ಎಂದರು. ಸಭೆಯಲ್ಲಿ ಹಲವು ಹೋಬಳಿಗಳಿಂದ ಆಯ್ಕೆಯಾಗಿದ್ದ 12 ಮಂದಿ ಫಲಾನುಭವಿಗಳಿಗೆ ಪಿಂಚಣಿ ಅದೇಶದ ಪ್ರತಿಗಳನ್ನು ಜಿಲ್ಲಾಧಿಕಾರಿ ಅವರು ವಿತರಿಸಿದರು. ಸಭೆಯಲ್ಲಿ ಹೋಬಳಿಯ ವಿವಿಧೆಡೆಗಳಿಂದ ಅಗಮಿಸಿದ ಸಾರ್ವಜನಿಕರಿಂದ ಕಂದಾಯ ಇಲಾಖೆಗೆ ಸಂಬಂಧಿಸಿದ ಅರ್ಜಿಗಳನ್ನು ವಿಲೆವಾರಿ ಮಾಡಲಾಯಿತು. ಮತ್ತು ಸಾರ್ವಜನಿಕ ಕುಂದು ಕೊರತೆಗಳ ಬಗ್ಗೆ ಅರ್ಜಿ ಸ್ವೀಕಾರ ಮಾಡಲಾಯಿತು.
    ಸಭೆಯಲ್ಲಿ ತಾಲೂಕು ಪಂಚಾಯತ್ ಸದಸ್ಯ ಬಿ.ಎಂ. ಗಣೇಶ್, ಜಿಲ್ಲಾ ಉಪವಿಭಾಗಾಧಿಕಾರಿ ಡಾ. ನಂಜುಡೇಗೌಡ, ವೀರಾಜಪೇಟೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಫಡ್ನೆಕರ್, ತಾಲೂಕು ತಹಶೀಲ್ದಾರ್ ಮಹದೇವ ಸ್ವಾಮಿ, ಕಂದಾಯ ಪರಿವೀಕ್ಷಕರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಅರಣ್ಯ ಇಲಾಖಾಧಿಕಾರಿಗಳು, ತೋಟಗಾರಿಕೆ ಇಲಾಖೆಯವರು, ಗ್ರಾಮ ಪಂಚಾಯತ್ ಸದಸ್ಯ ಮಂಡೇಟಿರ ಅನೀಲ್ ಮತ್ತು ಸಾರ್ವಜನಿಕರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News