×
Ad

ಕಾವ್ಯದಲ್ಲಿ ಜೀವನ ಮೌಲ್ಯ ಕಟ್ಟಿಕೊಟ್ಟ ಬೇಂದ್ರೆ

Update: 2016-08-28 22:36 IST

 ಶಿವಮೊಗ್ಗ, ಆ.28: ಶ್ರಾವಣದ ಕವಿ ಎಂದೇ ಖ್ಯಾತರಾದ ಡಾ. ದ.ರಾ. ಬೇಂದ್ರೆ ಅವರು ಜೀವನದ ಸಮರಸದ ಕುರಿತಂತೆ ಅನೇಕ ಕವನಗಳನ್ನು ರಚಿಸಿದ್ದಾರೆ. ಜೀವನ ಮೌಲ್ಯಗಳನ್ನು ತಮ್ಮ ಕಾವ್ಯದ ಮೂಲಕ ಕಟ್ಟಿಕೊಟ್ಟಿದ್ದಲ್ಲದೆ, ಅವುಗಳನ್ನು ಸರ್ವಕಾಲಿಕ ಸತ್ಯವಾಗಿಸಿದ್ದು ಅವರ ಹೆಗ್ಗಳಿಕೆಯಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್. ಹರಿಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ಧಾರವಾಡದ ಡಾ. ದ.ರಾ. ಬೇಂದ್ರೆ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಸಾಹಿತ್ಯ ಹುಣ್ಣಿಮೆಯ 129 ನೆ ಕಾರ್ಯಕ್ರಮದಲ್ಲಿ ಡಾ. ದ.ರಾ. ಬೇಂದ್ರೆ ಅವರ ಸ್ಮರಣೆಗಾಗಿ ಶ್ರಾವಣ ಕಾವ್ಯೋತ್ಸವ ಮತ್ತು ಅವರ ಕವನಗಳ ಗಾಯನ, ನೃತ್ಯ, ರಂಗರೂಪ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು. ದ.ರಾ.ಬೇಂದ್ರೆ ಕಾವ್ಯೋತ್ಸವ ಆಸ್ವಾದಿಸಲು ಯುವಕರು, ಮಕ್ಕಳು, ಹಿರಿಯರು ಸೇರಿದಂತೆ ಎಲ್ಲ ವಯೋಮಾನದವರು ಆಗಮಿಸಿರುವುದು ನಿಜಕ್ಕೂ ಸಂತಸದ ಸಂಗತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಉಪನ್ಯಾಸಕ ಡಾ. ಎಚ್.ಟಿ. ಕೃಷ್ಣಮೂರ್ತಿ ಮಾತನಾಡಿ, ಕನ್ನಡ ಸಾರಸ್ವತ ಲೋಕದಲ್ಲಿ ಕುವೆಂಪು ಮತ್ತು ಬೇಂದ್ರೆ ಎರಡು ಕಣ್ಣುಗಳಿದ್ದಂತೆ. ಈ ನೆಲದಲ್ಲಿ ಸಾಹಿತ್ಯ ಹುಣ್ಣಿಮೆಯ ನೆಪದಲ್ಲಿ ಶ್ರಾವಣದ ಸಂದರ್ಭದಲ್ಲಿ ಕಾವ್ಯಪೂಜೆ ನಡೆಯುತ್ತಿದೆ ಎಂದರು. ಪ್ರಪಂಚದ ಸಾಹಿತ್ಯಕ್ಕೆ ಕೊಡುಗೆಯಾದ ಬೇಂದ್ರೆ ಕಾವ್ಯಗಳನ್ನು ಅರ್ಥಮಾಡಿಕೊಂಡರೆ ಶೇಕ್ಸ್ ಪಿಯರ್ ಸಾಹಿತ್ಯ ಸುಲಭವಾಗಿ ಅರ್ಥ ಆಗುತ್ತೆ ಎನ್ನುವ ಮಾತಿದೆ. ವಿಮರ್ಶಕರಿಗೆ ಇಂದಿಗೂ ದೊಡ್ಡ ಸವಾಲಾಗಿರುವ ಅವರ ಕಾವ್ಯಗಳು ವಿಭಿನ್ನ ನೆಲೆಯಲ್ಲಿ ವಿಸ್ತಾರಗೊಳ್ಳುತ್ತ ಹೋಗುತ್ತವೆ. ಜೀವನಾನುಭವದ ಅಭಿವ್ಯಕ್ತಿ ಅವರ ಕವನಗಳ ಜೀವಾಳವೆಂದು ಹೇಳಿದರು. ಆದಿಚುಂಚನಗಿರಿ ಮಠದ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿ, ಬೇಂದ್ರೆ ಅವರ ಕಾವ್ಯ ಕುರಿತು ಚಿಂತನೆ-ಹಾಡು-ನೃತ್ಯ ಇವೆಲ್ಲ ಬಹಳ ಅರ್ಥಪೂರ್ಣವಾಗಿದೆ. ಕನ್ನಡ ಸಾಹಿತ್ಯದ ಸೊಬಗನ್ನು ಮತ್ತೆ ಮತ್ತೆ ಮೆಲುಕು ಹಾಕುವಂತಾಗಿದೆ. ಬೇಂದ್ರೆ ಅವರ ಮೂಲ ಮರಾಠಿ ಭಾಷೆಯಾದರೂ ಕನ್ನಡಕ್ಕೆ ದೊಡ್ಡ ಕೊಡುಗೆ ನೀಡಿದರು. ಅವರು ನಾಲ್ಕು ಭಾಷೆಗಳ ಅಧ್ಯಯನದಿಂದ ಈ ಸಾಧನೆ ಸಾಧ್ಯವಾಯಿತು ಎಂದು ವಿವರಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಡಿ. ಮಂಜುನಾಥ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಲಾವಿದ ಅನಂತ ದೇಶಪಾಂಡೆ ಅವರು ಬೇಂದ್ರೆ ವ್ಯಕ್ತಿತ್ವ ದರ್ಶನದ ರೂಪಕ ನಡೆಸಿಕೊಟ್ಟರು. ಗಾಯಕರಾದ ಜಯಶ್ರೀ ಶ್ರೀಧರ, ಪ್ರತಿಭಾ ನಾಗರಾಜ್, ಲಕ್ಷ್ಮೀ ಮಹೇಶ್, ನಾದಶ್ರೀ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳು, ಭಾವಬಿಂದು ಸಂಗೀತ ಶಾಲೆಯ ವಿದ್ಯಾರ್ಥಿಗಳು, ಪುಷ್ಪಾ ಪರ್ಫಾರ್ಮಿಂಗ್ ಶಾಲೆಯ ವಿದ್ಯಾರ್ಥಿಗಳು ವೃಂದಗಾನದಲ್ಲಿ ಹಾಡಿದರು.

 ಶ್ರಾವಣ ಕುರಿತು ಕವನ ಬರೆದಿದ್ದ ಕವಿಗಳಾದ ಸಾಗರದ ತಿಮ್ಮಪ್ಪ ಕಲಸಿ, ನಾಗರಕೊಡಿಗೆ ಗಣೇಶ್‌ಮೂರ್ತಿ, ಡಿ. ಗಣೇಶ್, ಸೊರಬದ ಜೋಶಿ, ನೂರ್‌ಸಮದ್ ಅಬ್ಬಲಗೆರೆ ಅವರು ಕವನಗಳನ್ನು ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಎಂ.ಎಂ. ಸ್ವಾಮಿ ಸ್ವಾಗತಿಸಿದರು. ಎಸ್. ಶಿವಮೂರ್ತಿ ಮತ್ತು ಉಪನ್ಯಾಸಕಿ ಪವಿತ್ರಾ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಕೆ.ಎಸ್. ಮಂಜಪ್ಪ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News