ದೂರು ದಾಖಲಿಸಲು ವಿಳಂಬ ಆರೋಪ: ಭಟ್ಕಳ ಎಸ್ಸೈ ರೇವತಿ ಅಮಾನತು
ಭಟ್ಕಳ, ಆ.28: ಸಾರ್ವಜನಿಕರು ನೀಡಿದ ದೂರನ್ನು ದಾಖಲಿಸಿಕೊಳ್ಳಲು ವಿಳಂಬ ತೋರಿದ್ದಾರೆ ಎಂದು ಆರೋಪಿಸಿ ಭಟ್ಕಳ ಪಿಎಸ್ಸೈ ರೇವತಿಯವರನ್ನು ಅಮಾನತು ಮಾಡಿ ಆದೇಶ ನೀಡಿದೆ. ಆದರೆ, ಅಮಾನತು ವಿಷಯವನ್ನು ಮೊದಲೇ ಅರಿತ ರೇವತಿಯವರು ಅಮಾನತು ಆದೇಶವನ್ನು ಪಡೆದುಕೊಳ್ಳದೆ ರಾಜೀನಾಮೆ ನೀಡಿರುವುದಾಗಿ ತಿಳಿದುಬಂದಿದೆ.
ಭಟ್ಕಳದ ಮೊಹಸಿನ್ ಎನ್ನುವವರಿಗೆ ಕೊಲೆ ಬೆದರಿಕೆ ಹಾಗೂ ಹಣದ ಬೇಡಿಕೆಯಿಟ್ಟವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ನಗರ ಠಾಣೆ ಎಸ್ಸೈ ರೇವತಿಗೆ ದೂರನ್ನು ನೀಡಲು ಹೋದಾಗ ಅವರು ಪ್ರಕರಣ ದಾಖಲಿಸಿಕೊಳ್ಳಲು ಮೀನಾಮೇಷ ಎಣಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅರ್ಜಿದಾರರು ಐಜಿ ಮತ್ತು ಡಿಜಿಯವರಿಗೆ ದೂರು ನೀಡಿದ್ದು, ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣರ ಮೂಲಕ ಭಟ್ಕಳದ ಎಎಸ್ಪಿಯವರಿಗೆ ಅದೇಶ ನೀಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ರೇವತಿಯವರಿಗೆ ಅಮಾನತು ಅದೇಶ ನೀಡಿದೆ.
ಆದರೆ ವಿಷಯವನ್ನು ಮೊದಲೆ ಅರಿತ ರೇವತಿಯವರು ಅಮಾನತ್ತು ಆದೇಶ ತೆಗೆದುಕೊಳ್ಳದೆ ತಾನೆ ತಮ್ಮ ಹುದ್ದೆಗೆ ರಾಜಿನಾಮೆ ಸಲ್ಲಿಸುವುದಾಗಿ ರಾಜಿನಾಮೆ ಪತ್ರ ನೀಡಿದ್ದಾರೆ. ಜೊತೆಗೆ ಮೇಲಾಧಿಕಾರಿಗಳು ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ರಾಜಿನಾಮೆ ಪತ್ರದಲ್ಲಿ ಆರೋಪಿಸಿದ್ದಾರೆ ತಿಳಿದುಬಂದಿದೆ.