ಪೊಲೀಸ್ ತರಬೇತಿ ಸಂಸ್ಥೆಗೆ ಕಂಪ್ಯೂಟರ್ ವಿತರಣೆ
ಕಡೂರು, ಆ. 29: ಭಾರತೀಯ ಸೇನೆ ಮತ್ತು ಪೊಲೀಸ್ ಇಲಾಖೆಗಳು ದೇಶ ಸೇವೆ ಮತ್ತು ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಲೈಫ್‌ಲೈನ್ ಫೀಡ್ಸ್ ಸಂಸ್ಥೆಯ ಹಣಕಾಸು ವಿಭಾಗದ ಉಪ ಹಿರಿಯ ವ್ಯವಸ್ಥಾಪಕ ಮುರಾರ್ಜಿ ತಿಳಿಸಿದರು.
ಅವರು ಸೋಮವಾರ ಗೆದ್ಲೇಹಳ್ಳಿ ಸಮೀಪದ ಪೊಲೀಸ್ ತರಬೇತಿ ಸಂಸ್ಥೆಗೆ 3.5 ಲಕ್ಷ ರೂ ಮೌಲ್ಯದ 10 ಕಂಪ್ಯೂಟರ್‌ಗಳನ್ನು ಉಚಿತವಾಗಿ ವಿತರಿಸಿ ಮಾತನಾಡಿದರು.
ಇಂತಹ ಇಲಾಖೆಗಳಿಗೆ ಅಗತ್ಯ ಸಲಕರಣೆಗಳ ಪರಿಕರಗಳು ಬೇಕಾಗಿರುತ್ತವೆ. ಎಲ್ಲವನ್ನು ಸರಕಾರ ಪೂರೈಸಲು ಸಾಧ್ಯವಾಗುವುದಿಲ್ಲ, ಅಂತಹ ಸಮಯದಲ್ಲಿ ಸಂಘಸಂಸ್ಥೆಗಳು ಸಹಾಯಹಸ್ತವನ್ನು ನೀಡಿದಲ್ಲಿ ಆ ಇಲಾಖೆಗಳು ಇನ್ನ್ನೂ ಉತ್ತಮವಾಗಿ ಜನಪರ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದರು.
ತರಬೇತಿ ಶಾಲೆಯ ಪ್ರಾಂಶುಪಾಲ ಚನ್ನಯ್ಯ ಮಾತನಾಡಿ, ನೂತನವಾಗಿ ಪ್ರಾರಂಭವಾಗಿರುವ ತರಬೇತಿ ಕೇಂದ್ರಕ್ಕೆ ಗಣಕಯಂತ್ರಗಳ ಆವಶ್ಯಕತೆಯಿದ್ದು ಈ ಬಗ್ಗೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು ಇದರ ಜೊತೆ ಕೆಲವು ಸಂಘ ಸಂಸ್ಥೆಗಳಿಗೂ ವಿನಂತಿಸಿ ಕೊಳ್ಳಲಾಗಿತ್ತು. ಆ ಹಿನ್ನೆಲೆಯಲ್ಲಿ ಲೈಫ್‌ಲೈನ್ ಸಂಸ್ಥೆಯು 10 ಕಂಪ್ಯೂಟರ್‌ಗಳನ್ನು ಕೊಡುಗೆಯಾಗಿ ನೀಡಿದೆ. ಇದರಿಂದ ಕೇಂದ್ರದ ಕಾರ್ಯಗಳಿಗೆ ಹಾಗೂ ತರಬೇತಿಗೆ ಸಹಾಯಕವಾಗಲಿದ್ದು ಲೈಫ್‌ಲೈನ್ ಸಂಸ್ಥೆಗೆ ಅಭಿನಂದಿಸುವುದಾಗಿ ಹೇಳಿದರು.
ಈ ಸಂದರ್ಭ ತರಬೇತಿ ವೃತ್ತ ನಿರೀಕ್ಷಕ ನಾರಾಯಣ ಪೂಜಾರಿ, ಲೈಫ್‌ಲೈನ್ ಸಂಸ್ಥೆಯ ಎಚ್.ಆರ್.ತೇಜಸ್, ಗಿರೀಶ್, ಅಕ್ರಮ್, ರವಿಕುಮಾರ್, ತರಬೇತಿ ಸಂಸ್ಥೆಯ ಪ್ರಥಮ ದರ್ಜೆ ಸಹಾಯಕ ಸೋಮೇಶ್ ಮತ್ತಿತರರು ಉಪಸ್ಥಿತರಿದ್ದರು.