ಅಂಬೇಡ್ಕರ್ ಕಂಚಿನ ಪ್ರತಿಮೆ ಶೀಘ್ರ ಲೋಕಾರ್ಪಣೆ
ಶಿವಮೊಗ್ಗ, ಆ.29: ಶಿವಮೊಗ್ಗ ನಗರದ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕಂಚಿನ ಪ್ರತಿಮೆ ಪ್ರತಿಷ್ಠಾಪನಾ ಕಾಮಗಾರಿ ಬಿರುಸುಗೊಂಡಿದ್ದು, ಒಂದೆರೆಡು ವಾರಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.
ಈಗಾಗಲೇ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಪ್ರತಿಮೆಯ ಪ್ರತಿಷ್ಠಾಪನೆ ಮಾಡಲಾಗಿದೆ. ಎಲ್ಲ ಅಂದುಕೊಂಡಂತೆ ನಡೆದರೆ ಸೆಪ್ಟಂಬರ್ ಮಾಸಾಂತ್ಯದಲ್ಲಿ ಪ್ರತಿಮೆಯ ಲೋಕಾರ್ಪಣೆಯಾಗುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆ ಅನಾವರಣಗೊಳಿಸಲು ಪಾಲಿಕೆ ಆಡಳಿತ ತೀರ್ಮಾನಿಸಿದೆ.ಕಾಮಗಾರಿ ಪೂರ್ಣಗೊಂಡ ನಂತರ ಪಾಲಿಕೆಯ ನಿಯೋಗವು ಬೆಂಗಳೂರಿಗೆ ತೆರಳಿ ಸಿದ್ದರಾಮಯ್ಯರನ್ನು ಆಹ್ವಾನಿಸಲು ನಿರ್ಧರಿಸಿದೆ. ಈ ಕುರಿತಂತೆ ಮೇಯರ್ ಎಸ್.ಕೆ. ಮರಿಯಪ್ಪಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪನೆ ಮಾಡುವ ಸ್ಥಳದ ಬಳಿ ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ. ಈಗಾಗಲೇ ಸ್ಥಳದಲ್ಲಿ ಪ್ರತಿಮೆ ನಿಲುಗಡೆ ಮಾಡಿ, ಗೋಪುರಕ್ಕೆ ಜೋಡಿಸುವ ಕೆಲಸ ನಡೆಯುತ್ತಿದೆ. ಮುಂದಿನ 15 ದಿನಗಳಲ್ಲಿ ಕಾಮಗಾರಿ ಪೂರ್ಣ ಗೊಳ್ಳುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪ್ರತಿಮೆ ಲೋಕಾರ್ಪಣೆ ಮಾಡಿಸುವ ಚಿಂತನೆಯಿರುವುದು ನಿಜ. ಈ ಬಗ್ಗೆ ಪಾಲಿಕೆ ಸದಸ್ಯರ ಅಭಿಪ್ರಾಯ ಪಡೆಯಲಾಗುವುದು. ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಪಾಲಿಕೆ ಕಚೇರಿ ಪ್ರವೇಶದ್ವಾರ ಹಾಗೂ ಕಚೇರಿ ಕಟ್ಟಡದ ಸುತ್ತಲೂ ನಡೆಯುತ್ತಿರುವ ಕಾಂಪೌಂಡ್ ನಿರ್ಮಾಣ ಇತರ ಅಭಿವದ್ಧಿ ಕಾಮಗಾರಿ ಕೂಡ ಭರದಿಂದ ಸಾಗುತ್ತಿದೆ. ಈ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆ ಪ್ರತಿಮೆ ಲೋಕಾರ್ಪಣೆಯ ದಿನಾಂಕ ನಿಗದಿಗೊಳಿಸಲಾಗುವುದು ಎಂದು ಇದೇ ವೇಳೆ ಪ್ರಶ್ನೆಯೊಂದಕ್ಕೆ ಮೇಯರ್ ಸ್ಪಷ್ಟಪಡಿಸಿದ್ದಾರೆ. ಸ್ಥಾಪನೆ:
ನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕಂಚಿನ ಪ್ರತಿಮೆ ಸ್ಥಾಪನೆ ಮಾಡಬೇಕೆಂದು ದಲಿತ ಪರ ಸಂಘಟನೆಗಳು ಹಲವು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದಿದ್ದವು. ಈ ಹಿಂದಿನ ನಗರಸಭೆ ಅವಧಿಯಲ್ಲಿ ಪ್ರತಿಮೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗಿತ್ತು. ಮುಂಬೈ ಸಂಸ್ಥೆಯೊಂದು ನಿರ್ಮಾಣ ಜವಾಬ್ದಾರಿ ಹೊತ್ತಿಕೊಂಡಿತ್ತು. ಆದರೆ ಕಾಲಮಿತಿಯಲ್ಲಿ ಪ್ರತಿಮೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿರಲಿಲ್ಲ. ಇದರ ವಿರುದ್ಧ ದಸಂಸ ಸಂಘಟನೆಯ ಗುರುಮೂರ್ತಿ ಬಣವು ಕಳೆದ ಒಂದೂವರೆ ವರ್ಷದ ಹಿಂದೆ ಡಿಸಿ ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿತ್ತು. ಸ್ಥಳಕ್ಕಾಗಮಿಸಿದ್ದ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ ಅವರು ಕಾಲಮಿತಿಯಲ್ಲಿ ಪ್ರತಿಮೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ ನಗರದಲ್ಲಿ ಪ್ರತಿಷ್ಠಾಪಿಸುವ ಭರವಸೆ ನೀಡಿದ್ದರು. ಅದರಂತೆ ಮುಂಬೈನಿಂದ ಶಿವಮೊಗ್ಗಕ್ಕೆ ಪ್ರತಿಮೆ ಕೂಡ ಆಗಮಿಸಿತ್ತು. ಡಿಎಆರ್ ಮೈದಾನದ ಕೊಠಡಿಯಲ್ಲಿ ಪ್ರತಿಮೆ ಇರಿಸಲಾಗಿತ್ತು. ಜಿಲ್ಲಾಡಳಿತವು ಪಾಲಿಕೆ ಆವರಣದಲ್ಲಿ ಪ್ರತಿಮೆ ಪ್ರತಿಷ್ಠಾಪನೆಗೊಳಿಸಲು ನಿರ್ಧರಿಸಿತ್ತು. ಅದರಂತೆ ಪಾಲಿಕೆ ಆವರಣದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಈ ಕಾಮಗಾರಿ ವಿಳಂಬ ಗತಿಯಲ್ಲಿ ನಡೆಯುತ್ತಿರುವ ಕುರಿತಂತೆ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಪಾಲಿಕೆ ಆಡಳಿತಕ್ಕೆ ಪತ್ರ ಬರೆದು ಕಾಮಗಾರಿ ಚುರುಕುಗೊಳಿಸುವಂತೆ ಸೂಚನೆ ನೀಡಿದ್ದರು.
ಡಾ.ಬಿ.ಆರ್.ಅಂಬೇಡ್ಕರ್ ಕಂಚಿನ ಪ್ರತಿಮೆ ಲೋಕಾರ್ಪಣೆಯ ದಿನಾಂಕ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸುವ ಕುರಿತಂತೆ ಪಾಲಿಕೆಯ ಸಾಮಾನ್ಯ ಸ
ೆಯಲ್ಲಿ ಚರ್ಚೆ ನಡೆಸಿ, ಸದಸ್ಯರ ಅಭಿಪ್ರಾಯ ಪಡೆದು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆ ಮೇಯರ್ ಎಸ್.ಕೆ.ಮರಿಯಪ್ಪಅವರು ತಿಳಿಸಿದ್ದಾರೆ.