×
Ad

ನ.12-13 ಬೃಹತ್ ಉದ್ಯೋಗ ಮೇಳ

Update: 2016-08-29 23:00 IST

ಕಾರವಾರ, ಆ.29: ನಗರದಲ್ಲಿ ನವೆಂಬರ್ 12 ಮತ್ತು 13ರಂದು ನಡೆಯಲಿರುವ ಬೃಹತ್ ಉದ್ಯೋಗ ಮೇಳ ಸಮರ್ಪಕವಾಗಿ ಆಯೋಜಿಸುವ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ ಹಿರಿಯ ಅಧಿಕಾರಿಗಳು ಹಾಗೂ ವಿವಿಧ ವಾಣಿಜ್ಯ ಸಂಸ್ಥೆಗಳ ಜೊತೆಗಿನ ಸಮಾಲೋಚನಾ ಸಭೆ ಸೋಮವಾರ ಬೆಂಗಳೂರಿನ ಖನಿಜ ಭವನದಲ್ಲಿರುವ ಉದ್ಯೋಗ ಮಿತ್ರ ಸಭಾಂಗಣದಲ್ಲಿ ನಡೆಸಿದರು.

ಸಭೆಯಲ್ಲಿ ಮಾತನಾಡಿದ ಸಚಿವ ಆರ್.ವಿ. ದೇಶಪಾಂಡೆ, ಉದ್ಯೋಗ ಮೇಳದ ಗರಿಷ್ಠ ಪ್ರಯೋಜನ ಯುವಜನತೆಗೆ ಸಿಗುವಂತೆ ಮಾಡಬೇಕಿದೆ. ಇದಕ್ಕಾಗಿ ಬೆಂಗಳೂರಿನಲ್ಲಿರುವ ಎಲ್ಲಾ ಕ್ಷೇತ್ರಗಳ ಪ್ರಮುಖ ಕಂಪೆನಿಗಳನ್ನು ಉದ್ಯೋಗ ಮೇಳಕ್ಕೆ ಆಹ್ವಾನಿಸಲಾಗುವುದು ಎಂದರು.

 ಈಗಾಗಲೇ ಈ ಕುರಿತು ವೆಬ್‌ಸೈಟ್ ತೆರೆಯಲಾಗಿದ್ದು, ಅದರಲ್ಲಿ ಆಸಕ್ತ ಕಂಪೆನಿಗಳು ಹೆಸರು ನೋಂದಾಯಿಸಬೇಕು. ವಾಣಿಜ್ಯ ಸಂಘ ಸಂಸ್ಥೆಗಳೂ ಉದ್ಯೋಗ ಮೇಳದ ಯಶಸ್ಸಿಗೆ ಕೈಜೋಡಿಸಬೇಕು. ನೆರೆಯ ಮುಂಬೈ, ಗೋವಾದಿಂದಲೂ ಕಂಪೆನಿಗಳನ್ನು ಮೇಳಕ್ಕೆ ಆಹ್ವಾನಿಸಲಾ ಗುತ್ತಿದೆ ಎಂದು ಮಾಹಿತಿ ನೀಡಿದರು.

ಉ ದ್ಯೋಗಾಕಾಂಕ್ಷಿಗಳು ಉದ್ಯೋ ಗ ಮೇಳದ ವೆಬ್‌ಸೈಟ್‌ನಲ್ಲಿ ನೋಂದಾಯಿಸಲು ಅವಕಾಶ ಕಲ್ಪಿಸ ಲಾಗಿದೆ. ಈಗಾಗಲೇ ನೋಂದಣಿ ಕಾರ್ಯ ಆರಂಭವಾಗಿದೆ. ಹೆಸರು ನೋಂದಾಯಿಸಿದವರಿಗೆ ಓರಿಯೆಂಟೇಶನ್ ತರಗತಿಗಳನ್ನು ಆಯೋಜಿಸಲಾಗುವುದು. ಉದ್ಯೋಗ ಮೇಳದಲ್ಲಿ ಭಾಗವಹಿಸಲು ಸೂಕ್ತ ತರಬೇತಿ ಹಾಗೂ ಕೌಶಲ್ಯಗಳು, ಸಂವಹನ ತರಬೇತಿಗಳನ್ನು ನೀಡಲು ಉದ್ದೇಶಿಸಲಾಗಿದೆ ಎಂದ ಸಚಿವರು, ತರಬೇತಿಗೆ ತಜ್ಞ ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗುವುದು. ಉದ್ಯೋಗ ಮೇಳದ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರು ಉದ್ಯೋಗ ಮೇಳ ಆಯೋಜನೆಯ ರೂಪುರೇಷೆಗಳನ್ನು ವಿವರಿಸಿದರು. ಸಭೆಯಲ್ಲಿ ಕಾರ್ಮಿಕ ಸಚಿವ ರುದ್ರಪ್ಪ ಲಮಾಣಿ, ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಿ.ವಿ. ಪ್ರಸಾದ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಆಯುಕ್ತ ಗೌರವ ಗುಪ್ತಾ, ಜಿಲ್ಲಾಧಿಕಾರಿ ಎಸ್.ಎಸ್. ನಕುಲ್, ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನ, ಉದ್ಯೋಗ ಮೇಳದ ನೋಡಲ್ ಅಧಿಕಾರಿ ಸದಾಶಿವ ಪ್ರಭು, ಆಳ್ವ ಫೌಂಡೇಶನ್‌ನ ವಿವೇಕ ಆಳ್ವ, ಕಾಸಿಯಾ, ಅವೇಕ್, ಅಸೋಚಾಂ, ಬೆಂಗಳೂರು ಚೇಂಬರ್ ಆಫ್ ಕಾಮರ್ಸ್ ಸೇರಿದಂತೆ ವಿವಿಧ ವಾಣಿಜ್ಯ ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸೇರಿದಂತೆ ಕೈಗಾರಿಕಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News